ಇಂದು ಸರ್ವಪಕ್ಷ ಸಭೆ

ಸೋಮವಾರ, 1 ಡಿಸೆಂಬರ್ 2008 (15:12 IST)
ಮುಂಬೈ ಉಗ್ರರ ದಾಳಿಯಿಂದ ರಾಜ್ಯ ಎಚ್ಚೆತ್ತುಕೊಂಡಂತಿದೆ. ರಾಜ್ಯದಲ್ಲಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಸಂಜೆ ಸರ್ವಪಕ್ಷ ಸಭೆ ಕರೆದಿದ್ದಾರೆ.

ರಾಜ್ಯದಲ್ಲಿ ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮುಂತಾದ ಮಹಾ ನಗರಗಳಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಚರ್ಚೆ ನಡೆಯಲಿದೆ. ಮಂಗಳೂರು ಸೇರಿದಂತೆ ಕರಾವಳಿ ಪ್ರದೇಶಗಳ ಮೂಲಕ ಉಗ್ರರು ಪ್ರವೇಶಿಸುವುದನ್ನು ತಡೆಗಟ್ಟುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮಾದರಿಯಲ್ಲಿ ರಾಜ್ಯದಲ್ಲಿಯೂ ಉಗ್ರರ ನಿಗ್ರಹಕ್ಕೆ ಶಸ್ತ್ರಸಜ್ಜಿತ ದಳ ರೂಪಿಸುವ ಸಂಬಂಧ ಸಭೆ ನಿರ್ಣಯಕ್ಕೆ ಬರುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ದುರ್ಘಟನೆ ಸಂಭವಿಸಿದಾಗ ಕೇಂದ್ರದಿಂದ ಪಡೆ ತರಿಸುವ ಬದಲು ರಾಜ್ಯದಲ್ಲಿಯೇ ಅಂತಹ ಪಡೆಯೊಂದನ್ನು ರೂಪಿಸಬೇಕು ಎನ್ನುವ ನಿರ್ಧಾರಕ್ಕೆ ಸರಕಾರ ಬಂದಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಸಭೆಯಲ್ಲಿ ಗೃಹ ಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಸಂಪುಟದ ಹಿರಿಯ ಸಚಿವರು ಹಾಗೂ ಉನ್ನತ ಪೊಲಿಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ