ಈ ಶೈಕ್ಷಣಿಕ ವರ್ಷದಲ್ಲಿ ಸಿಇಟಿ ಕಾಯ್ದೆ ಜಾರಿ ಮಾಡೋಲ್ಲ : ಸಿಎಂ ಭರವಸೆ

ಶುಕ್ರವಾರ, 20 ಡಿಸೆಂಬರ್ 2013 (18:30 IST)
PR
PR
ಬೆಂಗಳೂರು: 2006ರ ಸಿಇಟಿ ಕಾಯ್ದೆ ಜಾರಿಯ ವಿರುದ್ಧ ಸಾರ್ವಜನಿಕರು, ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ 2014-15ರ ಶೈಕ್ಷಣಿಕ ವರ್ಷದಲ್ಲಿ ಈ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ತಿಳಿಸಿದೆ. ಈಗ ಜಾರಿಯಲ್ಲಿರುವ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇದರಿಂದ ಸದ್ಯಕ್ಕೆ 2006ರ ಸಿಇಟಿ ಕಾಯ್ದೆಯ ಪೆಟ್ಟಿನಿಂದ ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 2006ರ ಸಿಇಟಿ ಕಾಯ್ದೆ ನಾವು ರೂಪಿಸಿದ್ದಲ್ಲ. ಬಿಜೆಪಿ-ಜೆಡಿಎಸ್ ಸರ್ಕಾರವಿದ್ದಾಗ ಅದನ್ನು ರೂಪಿಸಿತ್ತು. ಹೆಚ್ಚುವರಿ ಚಾರ್ಜ್ ವಸೂಲಿ ಮಾಡಬಾರ್ದು, ಯಾವ ವಿದ್ಯಾರ್ಥಿಗಳಿಗೂ ಅನ್ಯಾಯವಾಗಬಾರದು ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟು ಈ ಕಾಯ್ದೆಯನ್ನು ತರಲಾಗಿದೆ.

ಯಾರು ಈ ಕಾಯ್ದೆಯನ್ನು ತಂದಿದ್ದಾರೋ ಅವರೇ ಇದನ್ನು ವಿರೋಧ ಮಾಡ್ಲಿಕ್ಕೆ ಹೊರಟಿದ್ದಾರೆ. ವಿದ್ಯಾರ್ಥಿಗಳು ಗೊತ್ತಿಲ್ಲದೆಯೋ, ಗೊತ್ತಿದ್ದೋ ಅವರು ಕೂಡ ಚಳವಳಿ ಮಾಡಲು ಹೊರಟಿದ್ದಾರೆ. ಆದರೆ ವಿದ್ಯಾರ್ಥಿಗಳು ತಮಗೆ ಅನ್ಯಾಯವಾಗುತ್ತೆ, ಸೀಟುಗಳು ಕಡಿಮೆಯಾಗುತ್ತೆ ಎಂದುಕೊಂಡು ಮಾಹಿತಿ ಅಭಾವದಿಂದ ಚಳವಳಿ ಪ್ರಾರಂಭ ಮಾಡಿದ್ದಾರೆ. ಸಿಇಟಿ ತೆಗೆಯುತ್ತಾರೆ ಎಂಬ ಅಪಪ್ರಚಾರವೂ ನಡೆಯುತ್ತಿದೆ. ಪೋಷಕರಿಗೆ ಕೂಡ ಆತಂಕ ಆಗಿರಬಹುದು ಎಂದು ಬೆಂಗಳೂರಿನಲ್ಲಿ ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆದ್ದರಿಂದ 2006ರ ಕಾಯ್ದೆಯನ್ನು ನಾವು ಜಾರಿ ಮಾಡಲ್ಲ ಎಂದು ಸಿಎಂ ಹೇಳಿದರು. ನಾವು ಸದುದ್ದೇಶದಿಂದ ಜಾರಿ ಮಾಡಲು ನಿರ್ಧರಿಸಿದ್ದೆವು. ನಾವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2006ರ ಕಾಯ್ದೆಗೆ ತಿದ್ದುಪಡಿ ಬೇಕಾದ್ರೆ ಅದನ್ನು ಕೂಡ ಮಾಡ್ತೇವೆ. ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಿಇಟಿ ಕಾಯ್ದೆಯನ್ನು ಜಾರಿಗೆ ತರೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ನಂತರ ವ್ಯಾಪಕ ಮಾತುಕತೆ, ಸಮಾಲೋಚನೆ ಬಳಿಕ ಕಾಯ್ದೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು ಮತ್ತು ಸ್ಗಗಿತಸ್ಥಿತಿಯಲ್ಲಿ ಇರಿಸುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ