ಉಡುಪಿ ಪರ್ಯಾಯಕ್ಕೆ 'ಕಟ್ಟಿಗೆ ಮುಹೂರ್ತ'

ಬುಧವಾರ, 15 ಜುಲೈ 2009 (16:25 IST)
ಮುಂದಿನ ಪರ್ಯಾಯ ಪೀಠದ ಸ್ವಾಮೀಜಿಗಳಾದ ಶಿರೂರು ಮಠದ ಲಕ್ಷ್ಮೀವರತೀರ್ಥರು ತೃತೀಯ ಕೃಷ್ಣಪೂಜಾ ಪರ್ಯಾಯದ ಪೂರ್ವಭಾವಿ ಕಾರ್ಯಕ್ರಮ 'ಕಟ್ಟಿಗೆ ಮುಹೂರ್ತ'ಕ್ಕೆ ಮಂಗಳವಾರ ಮಧ್ವತೀರ್ಥದ ಬಳಿ ಚಾಲನೆ ನೀಡಿದರು.

ಸಾಂಪ್ರದಾಯಿಕ ರೀತಿಯಲ್ಲಿ ಸಿಂಗರಿಸಿದ ಶಿರೂರು ಮಠದಿಂದ ಡೋಲು, ತಮಟೆ, ನಗಾರಿ, ಆನೆಯ ಮೆರವಣಿಗೆಯೊಂದಿಗೆ ಸುಮುಹೂರ್ತ ಪ್ರಾರಂಭಿಸಿದ ಸ್ವಾಮೀಜಿ ಚಂದ್ರಮೌಳೇಶ್ವರ, ಅನಂತೇಶ್ವರ, ಕೃಷ್ಣಮಠ ಮತ್ತು ಮುಖ್ಯಪ್ರಾಣದೇವರ ಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಕನಕನ ಕಿಂಡಿಯಿಂದ ಕೃಷ್ಣನನ್ನು ನೋಡಿದರು, ಅಷ್ಟಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲಿಂದ ಕಟ್ಟಿಗೆ ಹೊತ್ತ ತಂಡದೊಂದಿಗೆ ರಥಬೀದಿಯನ್ನು ಸುತ್ತುಹಾಕಿ ಬಳಿಕ ಮಧ್ವಮಠದ ಬಳಿ ಬಂದು ಕಟ್ಟಿಗೆಯನ್ನು ಕಂಬಕ್ಕೆ ಆನಿಸಿ ಪುರೋಹಿತರಿಂದ ಅದನ್ನು ಪೂಜಿಸಿ ಕಟ್ಟಿಗೆ ಮುಹೂರ್ತಕ್ಕೆ ಅಧಿಕೃತ ಚಾಲನೆ ನೀಡಿದರು.

ಅಲ್ಲದೇ ಮಧ್ನಾಹ್ನ 12ರಿಂದ ರಾತ್ರಿ 12ರವರೆಗೆ ನಿರಂತರವಾಗಿ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮಹತ್ತರವಾದ ಉದ್ದೇಶ ಹೊಂದಿರುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ವೆಬ್ದುನಿಯಾವನ್ನು ಓದಿ