ಉಡುಪಿ: ಮೂಡದ ಒಮ್ಮತ, ಕೈಚೆಲ್ಲಿದ ಪೇಜಾವರ ಶ್ರೀ

ಶನಿವಾರ, 2 ಫೆಬ್ರವರಿ 2008 (14:45 IST)
ಪುತ್ತಿಗೆ ಶ್ರೀಗಳ ಪರ್ಯಾಯದ ಸಂದರ್ಭದಲ್ಲಿ ಶ್ರೀಕೃಷ್ಣ ಪೂಜೆಯ ಕುರಿತಂತೆ ಎದ್ದಿರುವ ಗೊಂದಲಗಳಿಗೆ ಸಂಬಂಧಿಸಿ ಹಮ್ಮಿಕೊಂಡಿದ್ದ ಸಂಧಾನವು ವಿಫಲವಾಗುವುದರೊಂದಿಗೆ ಈ ವಿವಾದ ಮತ್ತಷ್ಟು ಕಗ್ಗಂಟಾಗಿದೆ.

ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೇಜಾವರ ಶ್ರೀಗಳು ಇದರಿಂದ ಅಸಮಾಧಾನಗೊಂಡಿದ್ದು, ವಿವಾದ ಬಗೆಹರಿಸುವ ಪ್ರಯತ್ನಕ್ಕೆ ತಾವು ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವು ಸಿದ್ಧಪಡಿಸಿದ್ದ ಸಂಧಾನ ಸೂತ್ರಕ್ಕೆ ಪುತ್ತಿಗೆ ಶ್ರೀಗಳು ಒಪ್ಪಿದ್ದರು. ಆದರೆ ಸಭೆ ನಡೆಯುವಾಗ ಕೊನೆಯ ಕ್ಷಣದಲ್ಲಿ ಅವರು ಸಂಧಾನಕ್ಕೆ ನಿರಾಸಕ್ತಿ ತೋರಿಸಿದರು ಎಂದು ಪೇಜಾವರರು ಆದ ಬೆಳವಣಿಗೆಗಳ ಕುರಿತು ವಿವರಿಸಿದ್ದಾರೆ.

ಏನೇ ವಿರೋಧವಿದ್ದರೂ ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸುವುದು ಖಂಡಿತ ಎಂದೇ ಹೇಳುತ್ತಿದ್ದ ಪುತ್ತಿಗೆ ಶ್ರೀಗಳು, ಪರ್ಯಾಯ ಮಹೋತ್ಸವ ನಡೆದ ದಿನದಿಂದಲೂ ಕೃಷ್ಣ ವಿಗ್ರಹವನ್ನು ಮುಟ್ಟಿ ಪೂಜಿಸಿಲ್ಲ. ಉಳಿದ ಮಠಾಧೀಶರ ನೆರವಿಲ್ಲದೆ ತಾವೊಬ್ಬರೇ ಪೂಜೆ ಮಾಡುವುದು ಆಗದ ಕೆಲಸ ಎಂದು ಇದುವರೆಗೂ ಅವರಿಗೆ ನೆರವಾಗುತ್ತಿದ್ದ ಹಾಗೂ ಪೂಜೆಯ ಹೊಣೆ ಹೊತ್ತಿದ್ದ ಶಿರೂರು ಶ್ರೀಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಈಗ ಪೇಜಾವರರೂ ಸಂಧಾನದಿಂದ ಹಿಂದೆ ಸರಿದಿದ್ದಾರೆ, ಶಿರೂರು ಶ್ರೀಗಳಿಂದಲೂ ಪೂಜೆಗೆ ಸಹಕಾರ ಸಿಗುವ ಸಾಧ್ಯತೆಗಳಿಲ್ಲ. ಹೀಗಿರುವಾಗ ಶ್ರೀಕೃಷ್ಣ ಪೂಜೆಗೆ ಪುತ್ತಿಗೆ ಶ್ರೀಗಳು ಏನು ಮಾಡಲಿದ್ದಾರೆ ಎಂಬುದು ಮಠದ ಭಕ್ತರಿಗೆ ಜಿಜ್ಞಾಸೆಯಾಗಿದೆ.

ವೆಬ್ದುನಿಯಾವನ್ನು ಓದಿ