ಉಡುಪಿ ಲೋಕಸಭೆ ಉಪ ಚುನಾವಣೆ; ಜೆಡಿಎಸ್‌ನಿಂದ ಪೂಜಾಗಾಂಧಿ?

ಸೋಮವಾರ, 20 ಫೆಬ್ರವರಿ 2012 (13:58 IST)
PR
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆಯನ್ನು ಕಣಕ್ಕಿಳಿಸಲು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಕಸರತ್ತು ನಡೆಸುತ್ತಿದ್ದು, ಏತನ್ಮಧ್ಯೆ ಜೆಡಿಎಸ್‌ನಿಂದ ಮಧು ಬಂಗಾರಪ್ಪ ಹೆಸರು ಕೇಳಿಬಂದಿತ್ತಾದರೂ ಇದೀಗ ನಟಿ ಪೂಜಾ ಗಾಂಧಿಯನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ ಎನ್ನಲಾಗಿದೆ.

ಡಿ.ವಿ.ಸದಾನಂದ ಗೌಡರಿಂದ ತೆರವಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ತಮ್ಮ ಕೈಬಿಟ್ಟುಹೋಗದಂತೆ ಬಿಜೆಪಿ ಲೆಕ್ಕಚಾರ ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಕಾರ್ಕಳದ ಸುನೀಲ್ ಕುಮಾರ್, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಇನ್ನಿತರ ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಲಾಬಿ ಆರಂಭಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬಂಟ, ಬಿಲ್ಲವ, ಮೊಗವೀರ ಸಮುದಾಯ ಪ್ರಾಬಲ್ಯ ಪಡೆದಿದ್ದರೆ, ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿವೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಚಾರ ಲೆಕ್ಕಕ್ಕಿಲ್ಲ. ಇಲ್ಲಿ ಏನಿದ್ದರೂ ಪಕ್ಷ ಮತ್ತು ವ್ಯಕ್ತಿ ನಿಷ್ಠೆ ಪ್ರಮುಖ ಅಸ್ತ್ರ.

ಹಾಗಾಗಿ ಜೆಡಿಎಸ್ ನಟಿ ಪೂಜಾ ಗಾಂಧಿಯನ್ನು ಕಣಕ್ಕಿಳಿಸುವ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಕಾಂಗ್ರೆಸ್ ಕೂಡ ರಣತಂತ್ರ ರೂಪಿಸುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ ಸೇರಿದಂತೆ ಹಲವು ಘಟಾನುಘಟಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರಹಣಾಹಣಿ. ಕಾಂಗ್ರೆಸ್ ಪಕ್ಷ ಜಾತಿ ಹಾಗೂ ಪ್ರಭಾವದ ಲೆಕ್ಕಚಾರದಲ್ಲಿ ಜಯಪ್ರಕಾಶ್ ಹೆಗ್ಡೆಯವರನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಹಾಗಾದಲ್ಲಿ ಬಿಜೆಪಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ಅಖಾಡಕ್ಕಿಳಿಸುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ಹೇಳಿವೆ. ಇಲ್ಲವೇ ಬಿಜೆಪಿ ಮಾಜಿ ಶಾಸಕ ಸುನೀಲ್ ಕುಮಾರ್‌ಗೂ ಅವಕಾಶ ದಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಮೂರು ಪಕ್ಷಗಳು ಗೆಲ್ಲುವ ಕುದುರೆಯನ್ನ ಕಣಕ್ಕಿಳಿಸಲು ರಣತಂತ್ರ ರೂಪಿಸುತ್ತಿವೆ.

ವೆಬ್ದುನಿಯಾವನ್ನು ಓದಿ