ಉದುರುತ್ತಿದೆ ಜೆಡಿಎಸ್‌ ದಳಗಳು : ಗರಿ ಗೆದರಿರುತ್ತಿದೆ ಬಿಜೆಪಿ ಆಕಾಂಕ್ಷೆಗಳು

ಗುರುವಾರ, 29 ಆಗಸ್ಟ್ 2013 (12:10 IST)
PR
PR
ಬಿಜೆಪಿಯಲ್ಲಿ ಇದೀಗ ಮತ್ತೆ ಅಧಿಕಾರದ ಆಸೆಗಳು ಗರಿಗೆದರಿವೆ. ಜೆಡಿಎಸ್‌ ಪಕ್ಷದಲ್ಲಿನ ಆಂತರಿಕ ಮನಸ್ತಾಪಗಳು ಬಿಜೆಪಿಗೆ ವರದಾನವಾಗಲಿವೆ ಎಂಬ ಸೂಚನೆಗಳು ಮೂಡುತ್ತಿವೆ. ನೆನ್ನೆ ನಡೆದ ಜೆಡಿಎಸ್‌ ಸಭೆಯಲ್ಲಿ ಪಕ್ಷದ ವರಿಷ್ಟ ದೇವೇಗೌಡರಿಗೆ ಖೂಬಾ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದರು. ಈ ಬೆಳವಣಿಗೆಯಿಂದ ಜೆಡಿಎಸ್‌ ಪಕ್ಷದ ಒಂದು ದಳ ಬಿದ್ದಂತಾಗಿದ್ದು, ಪ್ರತಿಪಕ್ಷದ ಸ್ಥಾನ ಕೈತಪ್ಪಿ ಹೋಗುವ ಸಂಭವಗಳಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ತಲಾ 40 ಸೀಟುಗಳನ್ನು ಗೆದ್ದುಕೊಂಡಿದ್ದವು. ಆದರೆ ಅತಿ ಹೆಚ್ಚು ಮತಗಳು ಜೆಡಿಎಸ್‌ ಗೆ ಸಿಕ್ಕಿದ್ದರಿಂದ ಸಮರ್ಥ ಪ್ರತಿಪಕ್ಷವಾಗಿ ಜೆಡಿಎಸ್‌ ಹೊರ ಹೊಮ್ಮಿತ್ತು. ಆದರೆ ನೆನ್ನೆ ಖೂಬಾ ತಮ್ಮ ರಾಜಿನಾಮೆಯನ್ನು ಪಕ್ಷದ ವರಿಷ್ಟರಿಗೆ ನೀಡಿದ್ದಾರೆ. ಒಂದು ವೇಳೆ ವರಿಷ್ಟರು ಖೂಬಾ ರಾಜಿನಾಮೆಯನ್ನು ಅಂಗೀಕರಿಸಿದರೆ ಜೆಡಿಎಸ್‌ 39 ಸೀಟುಗಳಿಗೆ ಕುಸಿಯಲಿದೆ. ಹೀಗಾದಲ್ಲಿ 40 ಸೀಟುಗಳನ್ನು ಹೊಂದಿರುವ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲಿದೆ.

ಒಂದೆಡೆ ಚಾಮರಾಜಪೇಟೆಯ ಜೆಡಿಎಸ್‌ ಶಾಸಕ ಜಮೀರ್‌ ಅಹ್ಮದ್‌ ಮುನಿಸು ಮಾಡಿಕೊಂಡು ಕೂತಿರುವಾಗಲೇ ಖೂಬಾ ರಾಜಿನಾಮೆ ನೀಡಿದ್ದಾರೆ. ನೆನ್ನೆ ತಡರಾತ್ರಿ ಕುಮಾರಸ್ವಾಮಿ ಮತ್ತು ಜಮೀರ್‌ ಅಹ್ಮದ್‌ ಖಾಸಗೀ ಹೊಟೆಲ್‌ನಲ್ಲಿ ಭೇಟಿ ಮಾಡಿ ಜಮೀರ್‌ ಅವರನ್ನು ಪಕ್ಷ ತೊರೆಯದಂತೆ ಮನವೊಲಿಸಿದ್ದಾರೆ.ಆದರೆ ಖೂಬಾ ಮಾತ್ರ ಇನ್ನು ಯಾವುದೇ ಮನವೊಲಿಕೆಗೆ ಒಳಗಾಗಿಲ್ಲ.

ಒಂದು ವೇಳೆ ಖೂಬಾ ಮನಸ್ಸು ಬದಲಾಯಿಸಿ ಜೆಡಿಎಸ್‌ ಪಕ್ಷದಲ್ಲೇ ಇರಲು ಬಯಸಿದರೆ, ಪ್ರತಿಪಕ್ಷದ ಸ್ಥಾನ ಜೆಡಿಎಸ್‌ಗೆ ಉಳಿಯಲಿದೆ. ಇಲ್ಲವಾದಲ್ಲಿ ಅದು ಬಿಜೆಪಿ ಪಾಲಾಗಲಿದೆ. ಬಿಜೆಪಿ ಕೂಡ ಎಲ್ಲಾ ರಾಜಕೀಯ ವಿದ್ಯುಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯದ ವಿದ್ಯುಮಾನಗಳು ಬಿಜೆಪಿಯಲ್ಲಿ ಹೊಸ ಆಕಾಂಕ್ಷೆಗಳು ಗರಿಗೆದರುವಂತೆ ಮಾಡಿವೆ

ವೆಬ್ದುನಿಯಾವನ್ನು ಓದಿ