ಉಳ್ಳಾಲ ವಿಧಾನ ಸಭಾ ಚುನಾವಣೆಯತ್ತ ಎಲ್ಲರ ಕಣ್ಣು

ರಾಜ್ಯ ರಾಜಕೀಯ ನಾಯಕರ ಚಿತ್ತ ಈಗ ಉಳ್ಳಾಲದತ್ತ ನೆಟ್ಟಿದೆ. ತಮ್ಮ ತಮ್ಮ ಪಕ್ಷದಿಂದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚಿಂತನೆಯನ್ನೂ ನಡೆಸುತ್ತಿದೆ.

ಈ ನಡುವೆ ಎಲ್ಲಾ ಪಕ್ಷಗಳಲ್ಲೂ ಕಣಕ್ಕಿಳಿಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಜೆಪಿ ಚಂದ್ರಶೇಖರ ಉಚ್ಚಿಲ ಅವರನ್ನೇ ಈ ಬಾರಿಯೂ ಕಣಕ್ಕಿಳಿಸಿದೆ. ಇದರಿಂದಾಗಿ ಮಾಜಿ ಬಿಜೆಪಿ ಶಾಸಕ ಕೆ.ಜಯರಾಮ ಶೆಟ್ಟಿ ಅವರಿಗೆ ಅಸಮಾಧಾನವಾಗಿ ಮತ್ತೆ ಪಕ್ಷಾಂತರ ನಡೆಸುವ ಸಾಧ್ಯತೆಯಿದೆ ಎಂಬುದು ಒಂದು ವರ್ತಮಾನ.

ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಮತ್ತೆ ಬಿಜೆಪಿಗೆ ಕರೆಸಿಕೊಂಡು ಟಿಕೆಟ್ ಕೊಡುವುದಾಗಿ ನಂಬಿಸಲಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಈ ನಡುವೆ ಸಮ್ಮಿಶ್ರ ಸರ್ಕಾರದ ಧರ್ಮದಂತೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತಿಲ್ಲ. ಒಂದು ವೇಳೆ ಕಣಕ್ಕಿಳಿಸಿದರೂ ಅದು ಬಿಜೆಪಿ ಅಭ್ಯರ್ಥಿಗೇ ತೊಡಕಾಗಲಿದೆ. ಅದು ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೊದಲಿನಿಂದಲೂ ಇದ್ದು, ಒಂದು ಬಾರಿ ಬಿಜೆಪಿ, ಎರಡು ಬಾರಿ ಸಿಪಿಎಂ ಶಾಸಕರೂ ಇಲ್ಲಿಂದ ಆಯ್ಕೆಯಾಗಿದ್ದರು. ಮತ್ತೆ ಚಾಮುಂಡೇಶ್ವರೀ ಚುನಾವಣೆಯ ಕಾವು ಉಳ್ಳಾಲ ಚುನಾವಣೆಯಲ್ಲಿ ನಿರೀಕ್ಷಿಸಬಹುದು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

ವೆಬ್ದುನಿಯಾವನ್ನು ಓದಿ