ಎಂಪಿ ಸ್ಥಾನ ಬಿಡಿ, ಎಂಎಲ್‌ಸಿ ಆಗಿ: ಸದಾನಂದ ಗೌಡರಿಗೆ ಬಿಜೆಪಿ

ಗುರುವಾರ, 29 ಸೆಪ್ಟಂಬರ್ 2011 (16:52 IST)
PR
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಶೀಘ್ರದಲ್ಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಿಜೆಪಿ ಕೋರ್ ಕಮಿಟಿ ಆದೇಶದಂತೆ ಮೇಲ್ಮನೆ (ವಿಧಾನಪರಿಷತ್) ಪ್ರವೇಶಿಸಲು ಸಿದ್ದತೆ ನಡೆಸುತ್ತಿದ್ದಾರೆ. ಒಂದು ವೇಳೆ ಸದಾನಂದ ಗೌಡರು ಎಂಎಲ್‌ಸಿಯಾಗಿ ಆಯ್ಕೆಯಾದ್ರೆ ಮೇಲ್ಮನೆ ಪ್ರವೇಶಿಸಿದ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಿಧಾನಪರಿಷತ್ ಪ್ರವೇಶಿಸುವ ಬಗ್ಗೆ ಈಗಾಗಲೇ ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆ ಮೊದಲು ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆಯ ವಿಧಾನಪರಿಷತ್, ವಿಧಾನಸಭೆ ಸದಸ್ಯರಲ್ಲದ ಸದಾನಂದ ಗೌಡರು, ಮುಖ್ಯಮಂತ್ರಿಯಾದ ಆರು ತಿಂಗಳೊಳಗೆ ಚುನಾವಣೆ ಮೂಲಕ ಅಥವಾ ನಾಮನಿರ್ದೇಶನಗೊಳ್ಳುವ ಮೂಲಕ ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಬೇಕಾಗುತ್ತದೆ.

ಅಲ್ಲದೇ ಇನ್ನೊಂದು ಸುತ್ತಿನ ಸಚಿವ ಸಂಪುಟದ ವಿಸ್ತರಣೆ ಬಾಕಿ ಉಳಿದಿದ್ದು ಆ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇನ್ನಿತರರು ಸೇರಿ ಚರ್ಚೆ ನಡೆಸುವ ಮೂಲಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಏತನ್ಮಧ್ಯೆ ಯಡಿಯೂರಪ್ಪ ಆಪ್ತ ಎಂಎಲ್‌ಸಿ ಲೇಹರ್ ಸಿಂಗ್ ತಮ್ಮ ಸ್ಥಾನವನ್ನು ಸದಾನಂದ ಗೌಡರಿಗೆ ಬಿಟ್ಟು ಕೊಡುವ ಸಾಧ್ಯತೆ ಬಗ್ಗೆ ಊಹಾಪೋಹಗಳಿವೆ. ಆದರೆ ನಾಮಾಂಕಿತ ಸದಸ್ಯರಾಗಿರುವುದರಿಂದ ಸ್ಥಾನದಿಂದ ತೆರವುಗೊಳಿಸಲು ರಾಜ್ಯಪಾಲ ಭಾರದ್ವಾಜ್ ಅವರ ಅನುಮತಿ ಬೇಕಾಗುತ್ತದೆ.

ಲೆಹರ್ ಸಿಂಗ್ ಇಲ್ಲದಿದ್ದರೆ ಶೋಭಾ ಕರಂದ್ಲಾಜೆ ಆಪ್ತೆ ಭಾರತಿ ಶೆಟ್ಟಿ ಅವರು ತಮ್ಮ ಕ್ಷೇತ್ರದ ನಾಯಕ ಸದಾನಂದ ಗೌಡರಿಗೆ ಸ್ಥಾನ ಬಿಟ್ಟು ಕೊಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ