ಎಸ್ಸೆಸ್ಸೆಲ್ಸಿ-ಕಾಗೇರಿ ವಿರೋಧ ಸರಿಯಲ್ಲ: ಬಿಕೆಸಿ

ಭಾನುವಾರ, 28 ಜೂನ್ 2009 (16:10 IST)
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಐಚ್ಛಿಕ ಮಾಡುವ ಸಂಬಂಧ ಕೇಂದ್ರ ತೆಗೆದುಕೊಂಡಿರುವ ನಿರ್ಧಾರವನ್ನು ವಿರೋಧಿಸಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲಿನ ಒತ್ತಡವನ್ನು ದೂರ ಮಾಡುವ ಉದ್ದೇಶದಿಂದ ಕೇಂದ್ರ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಕ್ರಮ ಸ್ವಾಗತಾರ್ಹ. ಆದರೆ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆ ವಿಷಯಕ್ಕೆ ಸಂಬಂಧಿಸಿದಂತೆ ಕಾಗೇರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಗ್ರೇಡ್ ಬದಲಿಗೆ ಅಂಕ ನೀಡಿ ಎಂಬ ಕಾಗೇರಿ ಅವರ ವಾದವೂ ಸರಿಯಲ್ಲ. ಕೆಲ ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಅಥವಾ ಅಭಿವೃದ್ದಿಯಾಗಿಲ್ಲ. ಇತ್ತೀಚೆಗೆ ದಿನಕ್ಕೊಬ್ಬ ವಿದ್ಯಾರ್ಥಿ ಟಾಪ್ ಒನ್ ಎಂದು ಹೇಳಿಕೊಳ್ಳುತ್ತಿದೆ. ಇಂಥ ಅವ್ಯವಸ್ಥೆಯ ಬಗ್ಗೆ ಕ್ರಮ ಕೈಗೊಳ್ಳದ ಸಚಿವರು ಕೇಂದ್ರ ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿದ್ದಾರೆ.

ಕೇಂದ್ರದ ಈ ತೀರ್ಮಾನದಿಂದ ಪ್ರಾದೇಶಿಕತೆಗೆ ಧಕ್ಕೆ ಉಂಟಾಗುತ್ತದೆ ಎಂಬುದು ಸುಳ್ಳು. ಪ್ರಾದೇಶಿಕ ಭಾಷೆ ಸಂಸ್ಕೃತಿಯನ್ನು ಬಿಂಬಿಸುವಂತಿರುತ್ತದೆ. ವಿಜ್ಞಾನ ಮತ್ತು ಗಣಿತದಂತ ವಿಷಯಗಳು ಮಾತ್ರ ದೇಶಾದ್ಯಂತ ಒಂದೇ ಆಗಿರುತ್ತದೆ. ಇದರಿಂದ ಬೇರೆ ಬೇರೆ ರಾಜ್ಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ