ಏನಿದರ ರಹಸ್ಯ?: ಅಣ್ಣಿಗೇರಿಯಲ್ಲಿ ರಾಶಿ, ರಾಶಿ ತಲೆ ಬುರುಡೆ ಪತ್ತೆ

ಮಂಗಳವಾರ, 31 ಆಗಸ್ಟ್ 2010 (16:45 IST)
ಇಲ್ಲಿನ ಅಣ್ಣಿಗೇರಿ ಪ್ರದೇಶ ಇದೀಗ ಸಾರ್ವಜನಿಕರು, ಇತಿಹಾಸಕಾರರು, ಅಧ್ಯಯನಕಾರರಿಗೆ ಕುತೂಹಲದ ಕೇಂದ್ರ ಸ್ಥಳವಾಗಿದೆ. ಅದಕ್ಕೆ ಕಾರಣವಾಗಿದ್ದು, ಕಳೆದ ಮೂರು ದಿನಗಳಲ್ಲಿ ಅಲ್ಲಿ ಸುಮಾರು 300 ಅಧಿಕ ತಲೆಬುರುಡೆ ದೊರಕುತ್ತಿರುವುದು!

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಧಾರವಾಡದ ಅಣ್ಣಿಗೇರಿಯಲ್ಲಿ ಕಳೆದ ಮೂರು ದಿನಗಳಲ್ಲಿ ಮುನ್ನೂರಕ್ಕೂ ಅಧಿಕ ತಲೆ ಬುರುಡೆಗಳು ದೊರಕಿದೆ. ಕೆದಕಿದಷ್ಟು ತಲೆಬುರುಡೆಗಳು ದೊರಕುತ್ತಿರುವುದು ಗ್ರಾಮಸ್ಥರಲ್ಲೂ ಕುತೂಹಲ ಮೂಡಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಆಸಕ್ತರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಂಗಳವಾರವೂ ಕೂಡ ಪುರಾತತ್ವ ಇಲಾಖೆ ಉತ್ಖನನ ಮಾಡುತ್ತಿದ್ದು, ತಲೆಬುರುಡೆಯನ್ನು ಹೊರ ತೆಗೆಯುತ್ತಿದ್ದಾರೆ. ಸ್ಥಳಕ್ಕೆ ನವಲಗುಂದ ಶಾಸಕ ಶಂಕರ್, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ತಲೆ ಬುರುಡೆಯ ರಹಸ್ಯ ಭೇದಿಸಲು ಎರಡು ತಲೆ ಬುರುಡೆಯ ಸ್ಯಾಂಪನ್ ಅನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ಧಾರವಾಡದ ವಿವಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಶಿ, ರಾಶಿ ತಲೆಬರುಡೆಯ ಹಿಂದಿನ ರಹಸ್ಯವೇನು?: ಅಣ್ಣಿಗೇರಿಯಲ್ಲಿ ದೊರಕಿರುವ ಮುನ್ನೂರಕ್ಕೂ ಅಧಿಕ ತಲೆಬುರುಡೆ ಹಿಂದಿನ ರಹಸ್ಯದ ಬಗ್ಗೆ ಇದೀಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇಷ್ಟೊಂದು ಪ್ರಮಾಣದ ತಲೆಬುರುಡೆ ಒಂದೇ ಕಡೆ ಹೇಗೆ ಬಂತು? ಇದು ಸಾಮೂಹಿಕ ಕೊಲೆಯೇ?...ಹೀಗೆ ಹತ್ತು ಹಲವಾರು ಪ್ರಶ್ನೆಗಳು ಕೇಳಿ ಬರುತ್ತಿದೆ.

ಮೂರು ಸಾಲುಗಳಲ್ಲಿ ತಲೆ ಬುರುಡೆಗಳನ್ನು ನೀಟಾಗಿ ಜೋಡಿಸಿಡಲಾಗಿದೆ. ಅಷ್ಟೇ ಅಲ್ಲ ತಲೆ ಬುರುಡೆ ಮತ್ತು ಮುಂಡಗಳನ್ನು ಬೇರೆ, ಬೇರೆಯಾಗಿ ಜೋಡಿಸಿ ಇಡಲಾಗಿದೆ. ಹಾಗಾಗಿ ಈ ಬಗ್ಗೆ ಇತಿಹಾಸ ಮತ್ತು ಪುರಾತತ್ವ ಇಲಾಖೆ ಜಂಟಿಯಾಗಿ ಅಧ್ಯಯನ ನಡೆಸುತ್ತಿದೆ.

ಆದರೆ ತಲೆಬುರುಡೆಯ ಹಿಂದಿನ ರಸಹ್ಯ ಭೇದಿಸಲು ಸ್ಯಾಂಪಲ್‌ಗಳನ್ನು ಡಿಎನ್ಎ ಟೆಸ್ಟ್‌ಗೆ ಹೈದರಾಬಾದ್ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಲ್ಲದೇ ಹುಬ್ಬಳ್ಳಿಯ ಕಿಮ್ಸ್, ಧಾರವಾಡ ವಿವಿಯಲ್ಲಿ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ. ಇದು ಯುದ್ಧದ ಸಂದರ್ಭದಲ್ಲಿ ಸೆರೆ ಸಿಕ್ಕ ಸೈನಿಕರ ಶವವೇ ಅಥವಾ ಸಾಮೂಹಿಕವಾಗಿ ಕಗ್ಗೊಲೆ ಮಾಡಿ ಹೂತು ಹಾಕಿರುವುದೇ ಎಂಬ ಬಗ್ಗೆ ಸಂಪೂರ್ಣ ಅಧ್ಯಯನದ ನಂತರವಷ್ಟೇ ತಿಳಿಯಬೇಕಾಗಿದೆ ಎಂದು ಡಿಎನ್ಎ ತಜ್ಞ ಡಾ.ಗಜಾನನ ತಿಳಿಸಿದ್ದಾರೆ.

ಈ ತಲೆ ಬುರುಡೆ ಎಷ್ಟು ವರ್ಷ ಹಳೆಯದು, ಮರಣಪೂರ್ವ ಏನಾದರು ಗಾಯಗಳಿವೆಯಾ ಅಥವಾ ಇಲ್ಲವೇ. ಗಂಡೋ, ಹೆಣ್ಣೋ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಎರಡು ಮೂರು ವಾರಗಳ ನಂತರ ಇದಕ್ಕೆಲ್ಲ ಉತ್ತರ ಹೇಳಬಹುದು ಅಷ್ಟೇ, ಕೂಡಲೇ ಯಾವುದೇ ಫಲಿತಾಂಶ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ