ಏನಿದು...ಬಿಜೆಪಿ ಸಚಿವ ಯೋಗೀಶ್ವರ್ ಮೇಲೆ ಬಿತ್ತು 14 ಕೇಸ್!

ಗುರುವಾರ, 23 ಫೆಬ್ರವರಿ 2012 (13:47 IST)
PR
ಅಕ್ರಮ ಗ್ರಾನೈಟ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಡಿಕೆಶಿ ವಿರುದ್ಧ ಕದನಕ್ಕಿಳಿದು ಸುದ್ದಿ ಮಾಡಿದ್ದ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧವೇ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಗುರುವಾರ 14 ಕೇಸ್‌ಗಳು ದಾಖಲಾಗಿವೆ.

ಸಚಿವ ಯೋಗೀಶ್ವರ್ ಅವರ ಮೆಗಾಸಿಟಿ ವಂಚನೆ ಪ್ರಕರಣ ಇದೀಗ ಮತ್ತೆ ಅವರ ಕೊರಳಿಗೆ ಉರುಳಾಗಿ ಪರಿಣಿಮಿಸಿದೆ. ಕೇಂದ್ರ ಕಂಪನಿ ವ್ಯವಹಾರಗಳ ಸಚಿವಾಲಯ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 14 ದೂರನ್ನು ದಾಖಲಿಸಿದೆ.

ಮೆಗಾಸಿಟಿ ಡೆವಲಪರ್ಸ್ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವಾಲಯ ಯೋಗೀಶ್ವರ್ ವಿರುದ್ಧ ಕಂಪನಿ ಕಾಯ್ದೆಯಡಿ 8 ಹಾಗೂ ಐಪಿಸಿ ಕಾಯ್ದೆಯಡಿ 6 ದೂರುಗಳನ್ನು ದಾಖಲಿಸಿದೆ.

ಮೆಗಾಸಿಟಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್‌ನ ನಿವೇಶನ ಹಂಚಿಕೆ ಹಗರಣದ ರೂವಾರಿಯಾಗಿ, ಸಾವಿರಾರು ಜನರನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧದ ತನಿಖಾ ವರದಿಯು ಕೇಂದ್ರ ಕಂಪನಿ ವ್ಯವಹಾರಗಳ ಇಲಾಖೆಯ ಕೈಸೇರಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.

1995-2006ರ ವೇಳೆ ಸುಮಾರು 9 ಸಾವಿರ ಮಂದಿಯಿಂದ 64 ಕೋಟಿ ರೂಪಾಯಿಗಳನ್ನು ಯೋಗೀಶ್ವರ್ ಸಂಗ್ರಹಿಸಿದ್ದರು. ಇದರಲ್ಲಿ ಕಂಪನಿಯ 3.60 ಕೋಟಿ ರೂ.ಗಳನ್ನು ಲಪಟಾಯಿಸಿದ್ದಾರೆ ಎಂಬ ಆರೋಪ ಯೋಗೀಶ್ವರ್ ಮೇಲಿದೆ. ಈ ಯೋಜನೆಯಲ್ಲಿ ಸಾವಿರಾರು ಮಂದಿ ಹೂಡಿಕೆದಾರರಿಗೆ 37 ಕೋಟಿ ರೂ.ಗಳನ್ನು ವಂಚಿಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಸಿಐಡಿ ಪೊಲೀಸರು 2010ರಲ್ಲಿ ಯೋಗೀಶ್ವರ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಎಸ್ಎಫ್ಐಒ ಅಧಿಕಾರಿಗಳು ಮೆಗಾಸಿಟಿ ವಂಚನೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ, 2500 ಪುಟಗಳ ತನಿಖಾ ವರದಿಯನ್ನು ಆಗಸ್ಟ್ 2ನೇ ವಾರದಲ್ಲಿ ಕೇಂದ್ರ ಕಂಪನಿ ವ್ಯವಹಾರಗಳ ಇಲಾಖೆಗೆ ಸಲ್ಲಿಸಿತ್ತು.

ವೆಬ್ದುನಿಯಾವನ್ನು ಓದಿ