ಕನಿಷ್ಠ 2 ವರ್ಷ ಸೇವೆ ಸಲ್ಲಿಸಿದವರಿಗೆ ಟಿಕೆಟ್ ನೀಡಿ: ಕೃಷ್ಣ ಪತ್ರ

ಶನಿವಾರ, 27 ಜುಲೈ 2013 (11:52 IST)
PTI
ಬೆಂಗಳೂರು: ಎರಡು ಕ್ಷೇತ್ರಗಳಿಗೆ ಲೋಕಸಭೆ ಉಪಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ನಿಷ್ಠ ಕಾರ್ಯಕರ್ತರು ಮತ್ತು ಪಕ್ಷಕ್ಕೆ ಕನಿಷ್ಠ 2 ವರ್ಷಗಳು ಸೇವೆ ಸಲ್ಲಿಸಿದವರಿಗೆ ಟಿಕೆಟೆ ನೀಡಬೇಕೆಂದು ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ. ಕೃಷ್ಣ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದ್ದ ಎಸ್.ಎಂ.ಕೃಷ್ಣ ಅವರು ಇದ್ದಕ್ಕಿದ್ದಂತೆ ಸೋನಿಯಾ ಅವರಿಗೆ ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಪಾಲಿಸಲು ಬದ್ಧರಾಗಿರುವವರಿಗೆ ಮಾತ್ರ ಟಿಕೆಟ್ ನೀಡಿ ಎಂದು ಕೃಷ್ಣ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅತ್ತ ಎಸ್. ಎಂ. ಕೃಷ್ಣ ಪತ್ರ ಬರೆದ ಬೆನ್ನಲ್ಲೇ ತಾವು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಶಿವರಾಮೇಗೌಡ ಹೇಳಿಕೆ ನೀಡಿದ್ದಾರೆ. ನನ್ನ ವಿರುದ್ಧ ಕೆಲವು ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ. ತಾವು ಈಗಾಗಲೇ ಎಸ್.ಎಂ.ಕೃಷ್ಣ ಮತ್ತು ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇನೆ ಎಂದು ಶಿವರಾಮೇಗೌಡ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಆದರೆ ಶಿವರಾಮೇಗೌಡ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಬಗ್ಗೆ ಇನ್ನೂ ಖಚಿತಪಟ್ಟಿಲ್ಲ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಯಾವುದೇ ಹೇಳಿಕೆ ನೀಡಿಲ್ಲ. ಕೃಷ್ಣ ಅವರು ಶಿವರಾಮೇಗೌಡ ಅವರನ್ನು ಗುರಿಯಾಗಿಸಿಕೊಂಡು ಸೋನಿಯಾಗೆ ಪತ್ರ ಬರೆದಿರುವುದು ಸ್ಪಷ್ಟವಾಗಿದೆ. ಕೃಷ್ಣ ಅವರು ಆತ್ಮಾನಂದ ಅವರಿಗೆ ಟಿಕೆಟ್ ಕೊಡಿಸಲು ದೊಡ್ಡ ಪ್ರಯತ್ನ ನಡೆಸಿದ್ದಾರೆಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ