ಕರ್ತವ್ಯಕ್ಕೆ ಹಾಜರಾದ ವೈದ್ಯರು:ನಿಟ್ಟುಸಿರು ಬಿಟ್ಟ ರೋಗಿಗಳು

ಬುಧವಾರ, 30 ಸೆಪ್ಟಂಬರ್ 2009 (15:21 IST)
ಸರ್ಕಾರಿ ವೈದ್ಯರ ಪಟ್ಟು ಬಿಡದ ನಿಲುವಿನಿಂದಾಗಿ ಕರ್ತವ್ಯಕ್ಕೆ ಗೈರುಹಾಜರಾದ ಪರಿಣಾಮ ಮಂಗಳವಾರ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವಂತಾಗಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ ಭರವಸೆ ಮೇರೆಗೆ ಸಾಮೂಹಿಕ ರಾಜೀನಾಮೆ ನಂತರ ಬುಧವಾರ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೂಲಕ ರೋಗಿಗಳು ನಿಟ್ಟುಸಿರುವ ಬಿಡುವಂತಾಗಿದೆ.

ಅಕ್ಟೋಬರ್ 4ರೊಳಗೆ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ನಿಲ್ಲಿಸಿರುವುದಾಗಿ ಹೇಳಿರುವ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ, ಒಂದು ವೇಳೆ ಬೇಡಿಕೆ ಈಡೇರಿಲ್ಲದಿದ್ದರೆ ಮತ್ತೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ನಿನ್ನೆ ವೈದ್ಯರ ಮುಷ್ಕರದಿಂದಾಗಿ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರದಲ್ಲಿರುವ ಸರ್ಕಾರಿ ಆಸ್ಪತ್ರೆ, ನಗರ ಹೊರವಲಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ ಎಂದಿನಂತೆ ಜಮಾಯಿಸಿದ್ದ ರೋಗಿಗಳು ಪರದಾಡುವಂತಾಗಿತ್ತು.

ಅದೇ ರೀತಿ ಬೌರಿಂಗ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಮಾತ್ರ ಎಂದಿಗಿಂತ ಹೆಚ್ಚಾಗಿಯೇ ರೋಗಿಗಳ ಶುಶ್ರೂಷೆ ನಡೆಸುವಲ್ಲಿ ನಿರತರಾಗಿದ್ದರು. ಈ ಎರಡೂ ಆಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಇವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಯ ವೈದ್ಯರಿಗಿಂತ ಹೆಚ್ಚು ಸಂಬಳ ಪಡೆಯುತ್ತಿರುವುದರಿಂದ ಇವರು ಸಾಮೂಹಿಕ ರಾಜೀನಾಮೆಯಲ್ಲಿ ಪಾಲ್ಗೊಂಡಿರಲಿಲ್ಲವಾಗಿತ್ತು.

ವೈದ್ಯರ ಗೈರುಹಾಜರಿಯ ನಡುವೆಯೇ ವೈದ್ಯರು ಹೇಳಿದ ಚಿಕಿತ್ಸೆ ನೀಡುತ್ತಿದ್ದ ನರ್ಸ್‌ಗಳು ತಾವೇ ವೈದ್ಯರಾಗಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆಯನ್ನೂ ನೀಡಿದರು. ಅಲ್ಲದೆ, ಅವರಿಗೆ ಅಗತ್ಯವಿರುವ ಎಲ್ಲ ಔಷಧ ಚೀಟಿಯನ್ನೂ ಬರೆದುಕೊಟ್ಟರು. ಕೆಲವೆಡೆ ನರ್ಸ್‌ಗಳು ಹೌಸ್ ಸರ್ಜನ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದೂ ನಡೆದಿತ್ತು.

ವೆಬ್ದುನಿಯಾವನ್ನು ಓದಿ