ಕರ್ನಾಟಕವನ್ನು ನಂಬರ್ ಒನ್ ರಾಜ್ಯವಾಗಿ ಮಾಡುವುದು ಸಿಎಂ ಗುರಿ

ಮಂಗಳವಾರ, 27 ಆಗಸ್ಟ್ 2013 (14:11 IST)
PR
PR
ನವದೆಹಲಿ: ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯವಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಸಿದ್ದರಾಮಯ್ಯ ಮಂಗಳವಾರ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಮ್ಮ ಕನಸನ್ನು ಬಿಚ್ಚಿಟ್ಟರು. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುವ ಆಹಾರ ಭದ್ರತೆ ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಕ್ರಮ ಕೈಗೊಳ್ಳುವ ವಿಚಾರವನ್ನು ಸಿಎಂ ತಿಳಿಸಿದರು. ಸಿಬಿಐ ತನಿಖೆ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಅವರು ತಿಳಿಸಿದರು. ಅಕ್ರಮ ಗಣಿಗಾರಿಕೆಯಿಂದ ಉಂಟಾದ ನಷ್ಟ ವಸೂಲಿಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಸಿಎಂ ಈ ಸಂದರ್ಭದಲ್ಲಿ ಹೇಳಿದರು.

ಕಾನೂನು ಸಲಹೆ ಪಡೆದು ಶೀಘ್ರದಲ್ಲೇ ಈ ಕುರಿತು ನಿರ್ಧರಿಸುವುದಾಗಿ ಅವರು ತಿಳಿಸಿದರು. ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಮತ್ತು ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆಯನ್ನು ನೀಡುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಮಡೆ ಸ್ನಾನವನ್ನು ತಾವು ವಿರೋಧಿಸುವುದಾಗಿ ಹೇಳುವ ಮೂಲಕ ಮೂಢನಂಬಿಕೆಗಳಿಗೆ ತಮ್ಮ ಸರ್ಕಾರ ಪ್ರೋತ್ಸಾಹ ನೀಡುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸುಮಾರು 20-22 ಸ್ಥಾನಗಳನ್ನು ಗೆಲ್ಲುವುದು ತಮ್ಮ ಗುರಿ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯ ಆಪರೇಷನ್ ಕಮಲದ ರೀತಿಯಲ್ಲಿ ತಮ್ಮ ಪಕ್ಷ ಆಪರೇಷನ್ ಹಸ್ತವನ್ನು ಮಾಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ