ಕಾಂಗ್ರೆಸ್‌ಗೆ ಬ್ಲಾಕ್‌ಮೇಲ್: ಜಾಫರ್‌ ಷರೀಫ್‌ ವಿರುದ್ಧ ಜಮೀರ್ ದೂರು

ಸೋಮವಾರ, 7 ಏಪ್ರಿಲ್ 2014 (15:33 IST)
PR
PR
ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ವಿರುದ್ಧ ಜಮೀರ್ ಅಹ್ಮದ್ ಕಿಡಿಕಾರಿದ್ದು, ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಷರೀಫ್ ಕಾಂಗ್ರೆಸ್ ಪಕ್ಷವನ್ನು ಬ್ಲಾಕ್‌ಮೇಲ್ ಮಾಡ್ತಿದ್ದಾರೆ ಎಂದು ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಷರೀಫ್ ಜೆಡಿಎಸ್‌ ಪಕ್ಷಕ್ಕೆ ಸೇರ್ತಿನಿ ಅಂತೇಳಿ ಕೈಕೊಟ್ಟಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷವನ್ನು ಬಿಡುವುದಾಗಿ ಹೆದರಿಸುವ ಮೂಲಕ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಜೆಡಿಎಸ್ ಮುಖಂಡ ಜಮೀರ್ ಅಹ್ಮದ್ ವಾಗ್ದಾಳಿ ಮಾಡಿದರು. ಜಾಫರ್ ಷರೀಫ್ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಅವರಿಗೆ ತೀವ್ರ ಬೇಸರವಾಗಿತ್ತು.

ಜಾಫರ್ ಷರೀಫ್ ಅವರಿಗೆ ಟಿಕೆಟ್ ನೀಡದೇ ರಿಜ್ವಾನ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಜಾಫರ್ ಷರೀಫ್ ಅವರು ದೇವೇಗೌಡರನ್ನು ಭೇಟಿ ಮಾಡಿದ್ದು ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿತ್ತು. ದೇವೇಗೌಡರು ಸಹ ಷರೀಫ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆಂದು ತಿಳಿದುಬಂದಿತ್ತು. ಷರೀಫ್ ಜೆಡಿಎಸ್‌ಗೆ ಸೇರಿದರೆ, ಬೆಂಗಳೂರು ಸೆಂಟ್ರಲ್ ಅಥವಾ ಯಾವುದಾದರೂ ಕ್ಷೇತ್ರದಿಂದ ಟಿಕೆಟ್ ನೀಡುವ ಸಾಧ್ಯತೆಯಿದೆ. ಷರೀಫ್ ಅವರು ಹಜ್ ಯಾತ್ರೆಯಿಂದ ಮರಳಿದ ಬಳಿಕವೇ ಅವರು ಜೆಡಿಎಸ್‌ಗೆ ಸೇರುವ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂಬ ಸುದ್ದಿ ಹರಡಿತ್ತು. ಆದರೆ ಮೆಕ್ಕಾದಿಂದ ಷರೀಫ್ ಪತ್ರ ಬರೆದು ತಾವು ಯಾವ ಪಕ್ಷಕ್ಕೂ ಸೇರದೆ ಚುನಾವಣೆಯಲ್ಲಿ ತಟಸ್ಥವಾಗುಳಿಯುವುದಾಗಿ ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ