ಕಾಂಗ್ರೆಸ್‌ನಲ್ಲಿನ್ನೂ ಹೈಕಮಾಂಡ್ ಸಂಸ್ಕೃತಿ: ಶೆಟ್ಟರ್ ವ್ಯಂಗ್ಯ

ಸೋಮವಾರ, 1 ಏಪ್ರಿಲ್ 2013 (09:17 IST)
PR
PR
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲು ನವದೆಹಲಿಯಲ್ಲಿ ಬೀಡು ಬಿಟ್ಟಿರುವುದು ಆ ಪಕ್ಷದ ಸಂಸ್ಕೃತಿಯ ಪ್ರತೀಕ ಎಂದು ವ್ಯಂಗ್ಯವಾಡಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಆ ಪಕ್ಷದಲ್ಲಿನ್ನೂ ಹೈಕಮಾಂಡ್ ಸಂಸ್ಕೃತಿ ಇದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.

ಭಾನುವಾರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಹಂಚಿಕೆ ನವದೆಹಲಿಯಲ್ಲಿ ನಡೆಯುತ್ತಿದ್ದು, ಆ ಪಕ್ಷದ ಸಂಸ್ಕೃತಿ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ ಎಂದ ಹೇಳಿದ ಜಗದೀಶ್ ಶೆಟ್ಟರ್, ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು, ಸರಕಾರ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ಶ್ರೀರಕ್ಷೆ ಆಗಲಿವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪಕ್ಷ ಸಂಘಟನೆಗೆ ಶ್ರಮಿಸಿದ್ದು, ಅವರಿಗೆ ಪಕ್ಷದ ಉನ್ನತ ಹುದ್ದೆ ದೊರೆತಿದ್ದು, ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ, ಪಕ್ಷ ನೀಡಿರುವ ಹೊಣೆಗಾರಿಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವೆ. ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ. ಸಾಮಾನ್ಯ ವ್ಯಕ್ತಿಯನ್ನು ಶಕ್ತಿವಂತನಾಗಿ ಬಿಜೆಪಿ ಮಾಡಬಲ್ಲದು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ