ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಸಾಂಗ್ಲಿಯಾನಾ ಬಂಡಾಯದ ಬಾವುಟ

ಬುಧವಾರ, 19 ಮಾರ್ಚ್ 2014 (15:56 IST)
PR
PR
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗದೇ ನಿರಾಶರಾದ ಅನೇಕ ಮಂದಿ ಬಂಡಾಯದ ಬಾವುಟ ಹಾರಿಸಿ ಬೇರೆ ಪಕ್ಷಗಳಿಗೆ ಸೇರಿ ಅಲ್ಲಿಂದ ಟಿಕೆಟ್ ಪಡೆದು ಸ್ಪರ್ಧಿಸಲು ಹವಣಿಕೆ ಹಾಕಿದ್ದಾರೆ. ಜೆಡಿಎಸ್‌ನಲ್ಲಿ ಗೆಲ್ಲುವ ಅಭ್ಯರ್ಥಿಗಳ ಕೊರತೆಯಿರುವುದು ಮತ್ತು ಉಳಿದ ಪಕ್ಷಗಳು ಮುಕ್ತ ಮನಸ್ಸಿನಿಂದ ಬೇರೆ ಪಕ್ಷಗಳ ಮುಖಂಡರಿಗೆ ರತ್ನಗಂಬಳಿ ಸ್ವಾಗತ ನೀಡುತ್ತಿರುವುದು ಇದಕ್ಕೆ ಕಾರಣವೆನ್ನಲಾಗಿದೆ. ಇದಕ್ಕೊಂದು ನಿದರ್ಶನ ಸಾಂಗ್ಲಿಯಾನಾ. ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿರುವುದರಿಂದ ಬೇಸತ್ತು ಬಂಡಾಯದ ಬಾವುಟ ಹಾರಿಸಿದ್ದಾರೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಾಂಗ್ಲಿಯಾನಾ ಕಣಕ್ಕಿಳಿಯುವ ನಿರೀಕ್ಷೆಯಿದೆ.

ದೇವೇಗೌಡರು ಸಾಂಗ್ಲಿಯಾನಾ ಜತೆ ಸಂಪರ್ಕದಲ್ಲಿದ್ದು, ಜೆಡಿಎಸ್‌ಗೆ ಸೇರಿ ಚುನಾವಣೆ ಕಣಕ್ಕಿಳಿಯುವ ಎಲ್ಲ ನಿರೀಕ್ಷೆಗಳಿವೆ. ಸಾಂಗ್ಲಿಯಾನಾ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದೆಂದು ಹೇಳಲಾಗುತ್ತಿದೆ. 'ನಮ್ಮ ಸಮುದಾಯದಲ್ಲಿ ಅರ್ಹ ಅಭ್ಯರ್ಥಿಗಳಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರೇ ಹೈಕಮಾಂಡ್ ಮುಂದೆ ಹೇಳಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದೆ. ಈ ಬಾರಿಯ ಚುನಾವಣೆಗೆ ನನ್ನನ್ನು ಪರಿಗಣಿಸಬೇಕಿತ್ತು. ಶೇ. 3ರಷ್ಟಿರುವ ಕ್ರೈಸ್ತ ಸಮುದಾಯಕ್ಕೆ ಅವಕಾಶ ನೀಡದಿರುವುದು ತಮಗೆ ಬೇಜಾರಾಗಿದೆ' ಎಂದು ಸಾಂಗ್ಲಿಯಾನಾ ಪ್ರತಿಕ್ರಿಯಿಸಿದ್ದು, ಜೆಡಿಎಸ್‌ಗೆ ಸೇರುವ ಸಂಕಲ್ಪ ತೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ