ಕಾಂಗ್ರೆಸ್‌ ಮುಖಂಡ ಕೆ.ಸಿ.ಕೊಂಡಯ್ಯ ಅಮಾನತ್ತು ಸಾಧ್ಯತೆ.

ಭಾನುವಾರ, 24 ನವೆಂಬರ್ 2013 (11:59 IST)
PR
PR
ಕಾಂಗ್ರೆಸ್ ಕಚೇರಿಗೆ ಮೀಸಲಾಗಿದ್ದ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿರುವ ಆರೋಪವನ್ನು ಹೊತ್ತಿರುವ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಂಡಯ್ಯ ವಿರುದ್ಧ ಕೇಳಿ ಬಂದಿರುವ ದೂರನ್ನು ಪರಿಶೀಲಿಸಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊಂಡಯ್ಯ ಅವರನ್ನು ಅಮಾನತು ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೊಂಡಯ್ಯ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಳೆದ ಶುಕ್ರವಾರ ಕೆಪಿಸಿಸಿಗೆ ತನಿಖಾ ವರದಿ ಸಲ್ಲಿಸಿತ್ತು. ಪ್ರಾಥಮಿಕ ತನಿಖಾ ವರದಿಯಲ್ಲಿ ಆರೋಪ ಸಾಬೀತಾಗಿದೆ. ಹೈಕಮಾಂಡ್ ನಾಯಕರಿಗೆ ಪರಿಶೀಲನೆಗಾಗಿ ವರದಿ ಪ್ರತಿಯನ್ನು ಕಳಿಸಲಾಗಿದೆ ಎಂದು ಜಿ ಪರಮೇಶ್ವರ್ ಹೇಳಿದ್ದರು.

ತನಿಖಾ ವರದಿ ಪರಿಶೀಲಿಸಿದ ರಾಹುಲ್ ಗಾಂಧಿ ಅವರು ಶಿಸ್ತು ಕ್ರಮ ಕೈಗೊಳದೆ ವಿಳಂಬವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ ಪರಮೇಶ್ವರ್ ಅವರಿಗೆ ಸೂಚನೆ ಕಳಿಸಿದ್ದಾರೆ ಎಂದು ವರದಿ ಬಂದಿದೆ. ಸೋಮವಾರ ಕೊಂಡಯ್ಯ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕೆಪಿಸಿಸಿ ಮುಂದಾಗಿದೆ.

ಶಾಸಕ, ಸಂಸದರಾಗಿ ಕಾರ್ಯ ನಿರ್ವಹಿಸಿರುವ ಬಳ್ಳಾರಿಯ ಹಿರಿಯ ರಾಜಕಾರಣಿ ಕೊಂಡಯ್ಯ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು.ಈಗ ತಾವೇ ಭೂ ಕಬಳಿಕೆ ಆರೋಪದಡಿಯಲ್ಲಿ ಸಿಲುಕಿದ್ದಾರೆ.



ಕೆಸಿ ಕೊಂಡಯ್ಯ ಅಮಾನತಿಗೆ ರಾಹುಲ್ ಖಡಕ್‌ ಸೂಚನೆ.. ಮುಂದಿನ ಪುಟದಲ್ಲಿ ಮಾಹಿತಿ...

PR
PR
ಕೆಸಿ ಕೊಂಡಯ್ಯ ಅಮಾನತಿಗೆ ರಾಹುಲ್ ಖಡಕ್‌ ಸೂಚನೆ!

ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು ಕೆಪಿಸಿಸಿಗೆ 30 ಪುಟಗಳ ತನಿಖಾ ವರದಿ ಸಲ್ಲಿಸಿದ್ದರು. ಜೊತೆಗೆ ವಾಣಿಜ್ಯ ಸಂಕೀರ್ಣ ನಿರ್ಮಾಣವಾದ ಸ್ಥಳ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೇರಿದ್ದು ಎಂಬುದಕ್ಕೆ 8 ಪುಟಗಳ ದಾಖಲೆಯನ್ನು ಸಲ್ಲಿಸಲಾಗಿತ್ತು.ಬಳ್ಳಾರಿಯಲ್ಲಿ ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಹಾಗೂ ತರಬೇತಿ ಸಂಸ್ಥೆ ಸ್ಥಾಪಿಸಿರುವ ಪಕ್ಷದ ಮುಖಂಡ ಕೆ.ಸಿ.ಕೊಂಡಯ್ಯ, ಕಾಂಗ್ರೆಸ್ ಕಚೇರಿಗೆಂದು ಮೀಸಲಾಗಿದ್ದ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು, ನಗರದ ದುರ್ಗಮ್ಮ ದೇವಾಲಯದ ಬಳಿ86.76 ಚದರ ಅಡಿನಿವೇಶನವನ್ನು ಕೆಲವು ಷರತ್ತುಗಳನ್ನು ಹಾಕಿ 99 ವರ್ಷಗಳ ಅವಧಿಗೆ ನೀಡಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡು ಕೊಂಡಯ್ಯ ಅವರು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ. 2001ರಲ್ಲಿ ಮಂಜೂರಾದ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳ್ಳಾರಿ ನಗರ ಪಾಲಿಕೆ ಅನುಮತಿ ಸಿಕ್ಕಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ನಲ್ಲಿ ಮಾಜಿ ಸಚಿವರಾದ ಎಂವೈ ಘೋರ್ಪಡೆ, ಅಲ್ಲಂ ವೀರಭದ್ರಪ್ಪ ಹಾಗೂ ದಿವಾಕರ್ ಬಾಬು ಅವರು ಟ್ರಸ್ಟಿಗಳಾಗಿದ್ದರು. ಆದರೆ, ನಂತರ ಕೊಂಡಯ್ಯ ಅವರ ಪತ್ನಿ ಮೀನಾಕ್ಷಿ, ಪುತ್ರ ಕೆವಿಆರ್ ಪ್ರಸಾದ್ ಹೆಸರು ಟ್ರಸ್ಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು. ನಂತರ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ಸ್ಥಾಪನೆಗೆ ಕೊಂಡಯ್ಯ ಅವರ ಕುಟುಂಬ ಯೋಜನೆ ಹಾಕಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ