ಕಾಂಗ್ರೆಸ್ ಮತ್ತು ಬಿಜೆಪಿ ಖಳನಾಯಕ ಪಕ್ಷಗಳು: ಎಚ್‌ಡಿಕೆ ಕಿಡಿ

ಸೋಮವಾರ, 26 ಮಾರ್ಚ್ 2012 (14:26 IST)
PR
ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಾರಿ ಮಂಡಿಸಿದ ಬಜೆಟ್‌ ಸಂಪೂರ್ಣ ರೈತ ವಿರೋಧಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹೊಸನಗರದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಲಕ್ಷ ರೂ. ಬಜೆಟ್‌ನಲ್ಲಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರ ನೆರವಿಗೆ ಕನಿಷ್ಠ 2 ಸಾವಿರ ಕೋಟಿ ಹಣವನ್ನಾದರೂ ಮೀಸಲಿಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಜನತೆಯ ಪಾಲಿಗೆ ಖಳ ನಾಯಕರಂತೆ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವೇ ಇಲ್ಲ. ಈ ಸರ್ಕಾರಗಳು ರೈತರ ಭವಿಷ್ಯಕ್ಕೆ ಅಗತ್ಯವಾದ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರಲ್ಲದೇ, ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಕಬ್ಬು ಬೆಳೆಗಾರರಿಗೆ ಹೆಕ್ಟೇರ್‌ವೊಂದಕ್ಕೆ 25 ಸಾವಿರ ರೂ. ಪರಿಹಾರ ನೀಡುವುದರೊಂದಿಗೆ ಸಂಕಷ್ಟದಲ್ಲಿದ್ದ ರೈತರ ನೆರವಿಗಾಗಿ ಸಾಲವನ್ನು ಮನ್ನಾ ಮಾಡಿದ್ದಾಗಿಯೂ ಹೇಳಿದರು.

ಅಲ್ಲದೇ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಕಿವಿಗೊಡಬಾರದು. ಏಕೆಂದರೆ ಬಹಳ ಹಿಂದಿನಿಂದಲೂ ಕಾಂಗ್ರೆಸ್‌ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ಇತ್ತೀಚೆಗೆ ನಡೆದ ಉತ್ತರಪ್ರದೇಶ ಚುನಾವಣೆಯಲ್ಲೂ ತನ್ನ ಓಲೈಕೆ ತಂತ್ರವನ್ನು ಕಾಂಗ್ರೆಸ್‌ ಮುಂದುವರೆಸಿತ್ತು. ಅಲ್ಪಸಂಖ್ಯಾತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ