ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ.ವೈ.ಘೋರ್ಪಡೆ ವಿಧಿವಶ

ಶನಿವಾರ, 29 ಅಕ್ಟೋಬರ್ 2011 (19:12 IST)
PR
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ, ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕ ಎಂ.ವೈ.ಘೋರ್ಪಡೆ (80) ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ದೀರ್ಘಕಾಲದಿಂದ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಘೋರ್ಪಡೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಘೋರ್ಪಡೆ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಸಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ ಲಿಮಿಟೆಡ್ ಮುಖ್ಯಸ್ಥರಾಗಿದ್ದ ಎಂ.ವೈ.ಘೋರ್ಪಡೆಯವರು ಸಂಡೂರು ರಾಜವಂಶಸ್ಥರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಕಟ್ಟಿದ ಕೀರ್ತಿ ಅವರದ್ದು.

ಅಷ್ಟೇ ಅಲ್ಲ ಅರಣ್ಯ ಸಚಿವರಾಗಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಪಂಚಾಯತ್ ರಾಜ್ ಸಚಿವರಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿದ ಕೀರ್ತಿ ಕೂಡ ಎಂ.ವೈ.ಘೋರ್ಪಡೆಯವರಿಗೆ ಸಲ್ಲಬೇಕಾಗಿದೆ. ರಾಜಕಾರಣದಲ್ಲಿ ಯಾವುದೇ ಅಪವಾದಕ್ಕೆ ಸಿಲುಕದೆ ಮೌಲ್ಯಾಧಾರಿತ ರಾಜಕಾರಣ ನಡೆಸಿದ್ದರು.

ರಾಜಕಾರಣಿ, ಸಾಹಿತಿ ಹಾಗೂ ಖ್ಯಾತ ಫೋಟೋಗ್ರಾಫರ್ ಕೂಡ ಆಗಿದ್ದ ಘೋರ್ಪಡೆಯವರು ಪ್ರತಿಷ್ಠಿತ ಬ್ರಿಟನ್ ರಾಯಲ್ ಸೊಸೈಟಿ ಸದಸ್ಯರಾಗಿದ್ದ ಹೆಗ್ಗಳಿಕೆ ಕೂಡ ಅವರದ್ದು. ಸುದೀರ್ಘ ರಾಜಕೀಯ ಜೀವನ ನಡೆಸಿ ಶಾಸಕರಾಗಿ, ಸಚಿವರಾಗಿ, ಕಾಂಗ್ರೆಸ್ ಮುಖಂಡರಾಗಿ ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿದ್ದರು. ಭಾನುವಾರ ಬೆಳಿಗ್ಗೆ ಹೆಲಿಕಾಪ್ಟರ್‌ನಲ್ಲಿ ಘೋರ್ಪಡೆಯವರ ಪಾರ್ಥಿವ ಶರೀರವನ್ನು ಕೊಂಡೊಯ್ದು ಸಂಡೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ