ಕಾಂಗ್ರೆಸ್ ಸಚಿವನ ವಿರುದ್ಧ ಭ್ರಷ್ಟಾಚಾರದ ಆರೋಪ

ಶನಿವಾರ, 8 ಜೂನ್ 2013 (13:45 IST)
PR
ವಕ್ಫ್ ಮಂಡಳಿಗೆ ಸೇರಿದ ಗುಲ್ಬರ್ಗಾ ಜಿಲ್ಲೆಯಲ್ಲಿನ ಜಮೀನನ್ನು ವಕ್ಫ್ ಸಚಿವ ಖಮರುಲ್ಲಾ ಇಸ್ಲಾಂ ಕಬಳಿಸಿ ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಖಾಸಗಿ ದೂರು ದಾಖಲಾಗಿದೆ.

ತಬ್ರೇಜ್‌ ಪಾಷಾ ಸಲ್ಲಿಸಿದ ದೂರಿನ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶ ಎನ್‌.ಕೆ.ಸುಧೀಂದ್ರರಾವ್‌, ಪ್ರಕರಣದ ದೂರನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಜು.18ಕ್ಕೆ ತೀರ್ಮಾನಿಸಲಾಗುವುದು. ಅಲ್ಲದೇ ಪ್ರಕರಣದ ಆದೇಶ ಕಡತಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ಪ್ರಕರಣವನ್ನು ಮುಂದೂಡಿದರು.

ಪ್ರಕರಣ ಗುಲ್ಬರ್ಗಾ ಜಿಲ್ಲೆಯ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅಲ್ಲಿಯೇ ದೂರು ದಾಖಲು ಮಾಡದಿರಲು ಕಾರಣವೇನು? ಬೆಂಗಳೂರಿನಲ್ಲಿ ದೂರು ನೀಡುತ್ತಿರುವುದರಿಂದ ಉದ್ದೇಶವೇನು? ಎಂದು ನ್ಯಾಯಾಧೀಶರು ಪ್ರಶ್ನಿಸಿ ಸೂಕ್ತ ಉತ್ತರ ನೀಡುವಂತೆಯೂ ದೂರದಾರಿಗೆ ಆದೇಶಿಸಿದರು.

ಗುಲ್ಬರ್ಗಾ ಜಿಲ್ಲೆ ಬಡೆಪುರ ಗ್ರಾಮದಲ್ಲಿನ ವಕ್ಫ್ ಮಂಡಳಿಗೆ ಸೇರಿದ 8.34 ಎಕರೆ ಸರ್ಕಾರಿ ಜಮೀನನ್ನು ಸಚಿವ ಖಮರುಲ್ಲಾ ಅವರು ವಕ್ಫ್ ಮಂಡಳಿ ಸದಸ್ಯರಾಗಿದ್ದ 1997-98ರ ವೇಳೆಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಅಕ್ರಮವಾಗಿ ಕಬಳಿಸಿದ್ದಾರೆ. ಅಕ್ರಮ ಭೂಮಿಯಲ್ಲಿ 190 ನಿವೇಶನಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ ಎಂದು ತಬ್ರೇಜ್‌ ಪಾಷಾ ದೂರಿನಲ್ಲಿ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ