ಕಾಂಗ್ರೆಸ್ ಸೇರಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ

ಮಂಗಳವಾರ, 26 ಫೆಬ್ರವರಿ 2013 (11:22 IST)
PIB
PR
ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮೂಲತಃ ಕಾಂಗ್ರೆಸ್ಸಿನವರೇ ಆಗಿದ್ದ ಶಕುಂತಲಾ ಶೆಟ್ಟಿ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಇವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್ ನಿರಾಕರಿಸಲಾಗಿತ್ತು. ಈ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕುಂತಲಾ ಶೆಟ್ಟಿ 25 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿದ್ದರು.

ಶಕುಂತಲಾ ಶೆಟ್ಟಿಯವರ ಕಾಂಗ್ರೆಸ್ ಸೇರ್ಪಡೆಯನ್ನು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಇವರ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಬಲಿಷ್ಟಗೊಂಡಿದೆ ಎಂದರಲ್ಲದೆ, ಮಾರ್ಚ್ 7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿಯವರು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತಿದೆ ಎಂಬ ಸಚಿವ ಸಿ.ಟಿ. ರವಿಯವರ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್, ಕಾಂಗ್ರೆಸ್‌ಗೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿಯಿದೆ ಎಂದು ಹೇಳಿದರು.

ತಮ್ಮ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ತಾವು ಈ ಹಿಂದೆ ಕಾಂಗ್ರೆಸ್‌ನಲ್ಲಿಯೇ ಇದ್ದು, ನಂತರ ಬಿಜೆಪಿ ಸೇರ್ಪಡೆಗೊಂಡು ಶಾಸಕಿಯಾಗಿದ್ದೆ. ಈಗ ಮರಳಿ ಮನೆಗೆ ಬರುತ್ತಿರುವುದಕ್ಕೆ ಸಂತಸವಾಗಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಮಾಡಿದ ಮೋಸದಿಂದಾಗಿ ಸಕ್ರಿಯ ರಾಜಕಾರಣದಿಂದಲೇ ನಿವೃತ್ತಿ ಹೊಂದಲು ಬಯಸಿದ್ದ ತಮಗೆ ಹಿತೈಷಿಗಳು ನೀಡಿದ ಸಲಹೆಯಂತೆ ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ