ಕುಡಿಯುವ ನೀರು ಒದಗಿಸಲು ಎತ್ತಿನ ಹೊಳೆ ಯೋಜನೆ: ಸಿದ್ದರಾಮಯ್ಯ ಸ್ಪಷ್ಟನೆ

ಸೋಮವಾರ, 3 ಮಾರ್ಚ್ 2014 (13:16 IST)
PR
PR
ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಬೆಂಗಳೂರು ಜಿಲ್ಲೆಗಳು ಈ ಎಲ್ಲಾ ಜಿಲ್ಲೆಗಳ ಜತೆ ಹಾಸನ, ತುಮಕೂರು, ಚಿಕ್ಕಮಗಳೂರು ಈ ಜಿಲ್ಲೆಗಳಿಗೂ ಕೂಡ ನೀರನ್ನು ಕೊಡತಕ್ಕಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಎತ್ತಿನಹೊಳೆಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಹೇಳಿದರು. ಕೋಲಾರ, ಚಿಕ್ಕಬಳ್ಳಾಪುರ ಈ ಭಾಗದಲ್ಲಿ ಯಾವ ನದಿಮೂಲಗಳೂ ಕೂಡ ಇಲ್ಲ. ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಸಮಸ್ಯೆಯಾಗಿದೆ. ಮೊದಲನೇ ಆದ್ಯತೆ ಮೇಲೆ ಜನರಿಗೆ ಕುಡಿಯುವ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಹಿಂದಿನ ಸರ್ಕಾರ ಈ ಯೋಜನೆ ರೂಪಿಸಿದೆ. ಆದರೆ ವಿಸ್ತೃತ ಯೋಜನೆ ವರದಿ ತಯಾರಿಸಿಲ್ಲ.

ನಾವು ಇದಕ್ಕೆ ವಿಸ್ತೃತ ಯೋಜನೆ ವರದಿ ಸಲ್ಲಿಸುತ್ತೇವೆ. ಈ ಯೋಜನೆ ಬಗ್ಗೆ ಸುದೀರ್ಘವಾದ, ವೈಜ್ಞಾನಿಕ ಅಧ್ಯಯನ ಕೂಡ ನಡೆಸಿದ್ದೇವೆ. ಪಶ್ಚಿಮಘಟ್ಟಗಳ ಜಲಾನಯನ ಪ್ರದೇಶಗಳಲ್ಲಿ 2000 ಟಿಎಂಸಿಯಷ್ಟು ನೀರು ಸಿಗುತ್ತಿದ್ದು, ನೇತ್ರಾವತಿ ನದಿ ಜಲಾನಯನ ಪ್ರದೇಶದಲ್ಲಿ 400 ಟಿಎಂಸಿ ನೀರು ಸಿಗುತ್ತದೆ ಎಂದು ಐಐಎಸ್‌ಸಿಯ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದಾರೆ.

PR
PR
ಕೆಲವರು ಈ ಬಗ್ಗೆ ತಪ್ಪುಮಾಹಿತಿ ನೀಡೋದ್ರಿಂದ ನಾನು ಇದನ್ನು ಹೇಳಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗಲ್ಲ ಎಂದು ಸ್ಪಷ್ಟವಾಗಿ ತಿಳಿಸಲು ಬಯಸ್ತೇನೆ. ಬೇಕಾದ್ರೆ ಇನ್ನೊಮ್ಮೆ ಕರೆದು ಮಾತಾಡ್ತೇನೆ. ಇದು ಕೇವಲ ಕುಡಿಯುವ ನೀರಿಗೆ ಮತ್ತು ಕೆರೆಗಳನ್ನು ತುಂಬಿಸಲು ಮಾತ್ರ. ನೀರಾವರಿ ಯೋಜನೆಯಲ್ಲಿ ಎಂದು ಸ್ಪಷ್ಟವಾಗಿ ಹೇಳ್ತೇನೆ. ಕೋಲಾರದಲ್ಲಿ ಸುಮಾರು 139 ಕೆರೆಗಳಿವೆ. ಚಿಕ್ಕಬಳ್ಳಾಪುರದಲ್ಲಿ 198 ಕೆರೆಗಳಿವೆ. ನಮಗೆ ಒಟ್ಟು ಸಿಗುವ ನೀರು 24 ಟಿಎಂಸಿ ನೀರು. ಇದರಲ್ಲಿ 15 ಟಿಎಂಸಿ ಕುಡಿಯುವ ನೀರಿಗೆ ಮತ್ತು 9 ಟಿಎಂಸಿ ಕೆರೆಗಳನ್ನು ತುಂಬಿಸುವುದಾಗಿದೆ. ಆ ಮೂಲಕ ಅಂತರ್ಜಲವನ್ನು ಮೇಲೆ ತಂದು ಕೃಷಿಗೆ ಅನುಕೂಲವಾಗ್ತದೆ ಎನ್ನುವುದು ನಮ್ಮ ಉದ್ದೇಶ.

ಇದೇನೂ ಸಣ್ಣ ಯೋಜನೆಯಲ್ಲ. 12, 912 ಕೋಟಿ ರೂ. ಯೋಜನೆಯನ್ನು ಮಾಡಿರುವುದು ಸುಮ್ಮನೇ ಹಣ ವ್ಯರ್ಥಮಾಡುವುದಕ್ಕಲ್ಲ. ವೈಜ್ಞಾನಿಕವಾಗಿ ಇದು ಸಾಧ್ಯವೆಂದು ತಿಳಿದಮೇಲೆ ನಾವು ಕೈಗೆತ್ತಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ವೆಬ್ದುನಿಯಾವನ್ನು ಓದಿ