ಕುಮಾರಸ್ವಾಮಿ ಪ್ರವೇಶ: ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಹಾದಿ ಕಠಿಣ

ಶನಿವಾರ, 5 ಏಪ್ರಿಲ್ 2014 (18:02 IST)
PR
PR
ಚಿಕ್ಕಬಳ್ಳಾಪುರ: ವಲಸೆ ಹಕ್ಕಿ ಎಂಬ ಹಣೆಪಟ್ಟಿಯೊಂದಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ವಿರುದ್ಧ ಕಣಕ್ಕಿಳಿದಿದ್ದು, ಕುಮಾರಸ್ವಾಮಿ ಪ್ರವೇಶಧಿಂದ ಮೊಯ್ಲಿ ಗೆಲ್ಲುವ ಹಾದಿ ಕಠಿಣವಾಗಿ ಪರಿಣಮಿಸಿದೆ. ರಾಮನಗರದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ವಿರುದ್ಧ ಸೋಲನ್ನಪ್ಪಿದ್ದರು. ಚಿಕ್ಕಬಳ್ಳಾಪುರದಿಂದ ಜೆಡಿಎಸ್ ಇಬ್ಬರು ಶಾಸಕರನ್ನು ಹೊಂದಿದ್ದು, ಅಲ್ಲಿನ ಮತದಾರರು ಮುಖ್ಯವಾಗಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದವರು.

PR
PR
2009ರ ಚುನಾವಣೆಯಲ್ಲಿ ಬಿಜೆಪಿಯ ದುರ್ಬಲ ಅಭ್ಯರ್ಥಿ ಅಶ್ವತ್ಥನಾರಾಯಣ ವಿರುದ್ಧ ಮೊಯ್ಲಿ ಜಯಗಳಿಸಿದ್ದರು. ಮಾಜಿ ಸಚಿವ ಬಚ್ಚೇಗೌಡ ಈಗ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೊಯ್ಲಿ ಕಳೆದ ಬಾರಿ ಹೊರಗಿನವರು ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದರೂ 51,000 ಮತಗಳಿಂದ ಜಯಗಳಿಸಿದ್ದರು.ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ವೀರಪ್ಪ ಮೊಯ್ಲಿ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸುವ ಮೂಲಕ ಪ್ರಚಾರ ಮಾಡಿದ್ದು ಮೊಯ್ಲಿಗೆ ಮೈನಸ್ ಪಾಯಿಂಟ್ ಆಗಿ ಪರಿಣಮಿಸಬಹುದು. ಕ್ಷೇತ್ರದ ಜನತೆ ಜಾತಿ ಆಧಾರದ ಮೇಲೆ ವೋಟ್ ಮಾಡಿಲ್ಲದಿರುವುದು 2009ರಲ್ಲಿ ತಾವು ಸಾಧಿಸಿದ ಜಯವೇ ಸಾಕ್ಷಿವೊದಗಿಸುತ್ತದೆ ಎಂದು ಮೊಯ್ಲಿ ಹೇಳಿದ್ದಾರೆ.

PR
PR
ಪಕ್ಷವು ನಾಲ್ಕು ವಿಧಾನಸಭೆ ಸ್ಥಾನಗಳನ್ನು ಗೆದ್ದಿರುವುದು ಕೂಡ ಅದಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ ಎಂದು ಮೊಯ್ಲಿ ಹೇಳಿದ್ದಾರೆ.ತಾವು ಚುನಾವಣೆ ಮೇಲೆ ಕಣ್ಣಿಟ್ಟು ಎತ್ತಿನಹೊಳೆ ಯೋಜನೆಯನ್ನು ಪ್ರಕಟಿಸಿದ್ದೇನೆಂಬ ಆರೋಪಗಳನ್ನು ಮೊಯ್ಲಿ ಅಲ್ಲಗಳೆದರು. ಬಿಜೆಪಿ ಆಡಳಿತದ ಮೂವರು ಮುಖ್ಯಮಂತ್ರಿಗಳೇ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿಸಿದರು.ಈ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಪ್ರಮುಖ ವಿಷಯವಾಗಿದ್ದು, ಎತ್ತಿನಹೊಳೆ ಯೋಜನೆಯು ನೇತ್ರಾವತಿ ಉಪನದಿಗಳಿಂದ ನೀರಿನ ದಿಕ್ಕನ್ನು ಬದಲಿಸಿ ಚಿಕ್ಕಬಳ್ಳಾಪುರಕ್ಕೆ ನೀರನ್ನು ಒದಗಿಸುವುದಾಗಿದೆ. ಆದರೆ ಈ ಯೋಜನೆ ಕಾರ್ಯಸಾಧ್ಯವಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಚ್ಚೇಗೌಡ ಸ್ಪರ್ಧಿಸಿರುವುದರಿಂದ ಒಕ್ಕಲಿಗ ಮತಗಳು ಹಂಚಿಹೋಗುವ ಸಾಧ್ಯತೆಗಳಿವೆ.

ಜೆಡಿಎಸ್ ಎದುರಾಳಿಯನ್ನು ಕೆರೆಯಿಂದ ಕೆರೆಗೆ ಹಾರುವ ಕೊಕ್ಕರೆಗೆ ಬಚ್ಚೇಗೌಡ ಹೋಲಿಸಿದ್ದಾರೆ.ಅವರು ತಮ್ಮ ರಾಜಕೀಯ ಜನ್ಮಭೂಮಿ ಬೆಂಗಳೂರು ಗ್ರಾಮಾಂತರದಿಂದ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಬಾಗೆಪಲ್ಲಿ ಶಾಸಕ ವಿ. ಶ್ರೀರಾಮರೆಡ್ಡಿ ಇಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ನಿಂತಿದ್ದು, ಬಾಗೆಪಲ್ಲಿ ಅಸೆಂಬ್ಲಿಯನ್ನು ಎರಡು ಬಾರಿ ಪ್ರತಿನಿಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ