ಕೆಪಿಎಸ್‌ಸಿ ನೇಮಕಾತಿ ಪ್ರಕರಣ ಸಿಐಡಿ ತನಿಖೆಗೆ

ಶನಿವಾರ, 29 ಜೂನ್ 2013 (13:30 IST)
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 362 ಗೆಜೆಟೆಡ್‌ ಪ್ರೊಬೇಷನರ್ ಹುದ್ದೆಗಳ ನೇಮಕಾತಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಗೆಜೆಟೆಡ್‌ ಪ್ರೊಬೇಷನರ್ ಹುದ್ದೆಗಳ ನೇಮಕಾತಿ ಸಂದರ್ಶನದಲ್ಲಿ ಭಾರೀ ಅಕ್ರಮ ನಡೆದಿದೆ. ಆಯೋಗದ ಸದಸ್ಯರೇ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಅಧಿಕೃತವಾಗಿ ಆದೇಶ ಹೊರಡಿಸಿರಲಿಲ್ಲ. ಇದೀಗ ಆದೇಶ ಹೊರಡಿಸಿ ಸಿಐಡಿಗೆ ರವಾನಿಸಲಾಗಿದೆ.

362 ಗೆಜೆಟೆಡ್‌ ಪ್ರೊಬೆಷನರ್ ಹುದ್ದೆಗಳ ಭರ್ತಿಗಾಗಿ ಕೆಪಿಎಸ್‌ಸಿ ಲಿಖೀತ ಪರೀಕ್ಷೆ ಹಾಗೂ ಮೌಖೀಕ ಸಂದರ್ಶನ ನಡೆಸಿತ್ತು. ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿತ್ತು. ಈ ಮಧ್ಯೆ, ಲಿಖೀತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸಂದರ್ಶನದಲ್ಲಿ ಕಡಿಮೆ ಅಂಕ ನೀಡಲಾಗಿದೆ. ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಲು ಹಣದ ವ್ಯವಹಾರ ನಡೆದಿದೆ. ಕೆಪಿಎಸ್‌ಸಿ ಸದಸ್ಯರೇ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.

ಡಾ.ಮೈತ್ರಿ ಎಂಬುವರು ಕೆಪಿಎಸ್‌ಸಿ ಸದಸ್ಯರು ಹಣಕ್ಕಾಗಿ ಒತ್ತಾಯಿಸಿದ್ದ ವಿಷಯ ಬಹಿರಂಗಪಡಿಸಿದ್ದರು. ಮುಖ್ಯಮಂತ್ರಿಯವರಿಗೂ ಈ ಕುರಿತು ಮನವಿ ಸಲ್ಲಿಸಿದ್ದರು.

ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ತನಿಖೆ ಪ್ರಾರಂಭವಾಗಲಿದ್ದು, ಪ್ರಕರಣದ ಬಗ್ಗೆ ಅಧಿಕೃತವಾಗಿ ದೂರು ದಾಖಲು ಮಾಡಿಕೊಂಡ ನಂತರ ಆರೋಪಗಳ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಲಿರುವ ಸಿಐಡಿ ಅಧಿಕಾರಿಗಳು, ಲಿಖೀತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕ, ಸಂದರ್ಶನದಲ್ಲಿ ನೀಡಿರುವ ಅಂಕಗಳ ಪರಿಶೀಲನೆ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ