ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆಶಿ

ಮಂಗಳವಾರ, 5 ಅಕ್ಟೋಬರ್ 2010 (15:15 IST)
'ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಕಾಡಿ ಬೇಡಿ ಅಧಿಕಾರ ಪಡೆಯುವ ಅಗತ್ಯ ನನಗಿಲ್ಲ. ಕಾರ್ಯಕರ್ತರ ಭಾವನೆ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಸದಾ ಬದ್ಧ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಜ್ಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು 'ಅಧ್ಯಕ್ಷ ಸ್ಥಾನ ಬೇಕೆಂದು ನಾನು ಅರ್ಜಿ ಹಾಕುವುದಿಲ್ಲ. ಯಾರಾದರೂ ಅರ್ಜಿ ಹಾಕುವುದಾದರೆ ಅಂಗಡಿಯಿಂದ ಅರ್ಜಿ ಪಡೆದು ಹಾಕಲಿ' ಎಂದರು.

ಬಿಜೆಪಿ ಸರಕಾರ ಆರಂಭದಿಂದಲೂ ಹೀಗೆ ಇದೆ. ಮೂರು ತಿಂಗಳಿಗೊಂದು ಹಗರಣದ ಮಾಲೆ ಧರಿಸುತ್ತಿದೆ. ರೈತರ ಸಮಸ್ಯೆ ಬಗ್ಗೆ ಕರೆದ ಅಧಿವೇಶನದಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಗಣಿಗಾರಿಕೆ ಬಗ್ಗೆ ಕರೆದ ವಿಶೇಷ ಅಧಿವೇಶನ ಪೂರ್ಣವಾಗಲಿಲ್ಲ. ಸರಕಾರ ಜನತೆಯನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ನಾವು ಪಾದಯಾತ್ರೆ ನಡೆಸಿದೆವು. ಈಗ ಭೂ ಹಗರಣದ ಬಗ್ಗೆ ಅಧಿವೇಶನ ನಡೆಸುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಯಾವುದಕ್ಕೂ ಹಿಂದೆ ಸರಿಯುವುದಿಲ್ಲ. ಚರ್ಚೆಗೆ ನಾವು ತಯಾರಾಗಿದ್ದೇವೆ. ಸತ್ಯಾಸತ್ಯತೆ ಹೊರ ಬರಲಿ. ನಿರಂತರ ಹೋರಾಟಕ್ಕೆ ನಾವು ರೆಡಿ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ