ಕೇಂದ್ರದಲ್ಲಿ ಯುಪಿಎ, ಎನ್‌ಡಿಎ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಗೌಡರ ಗುಡುಗು

ಬುಧವಾರ, 26 ಮಾರ್ಚ್ 2014 (13:20 IST)
PR
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 5 ವರ್ಷಗಳು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸತತ ಹತ್ತು ವರ್ಷಗಳು ದೇಶದ ಆಡಳಿತ ನಡೆಸಿವೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಪ್ರಯೋಜನವಾಗಿಲ್ಲ. ಥರ್ಡ್ ಫ್ರಂಟ್ ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಹಾಸನ ಲೋಕಸಭೆಯ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ನಂತರ ಮಾತನಾಡಿದ ಅವರು, 1996ರಲ್ಲಿ ರಾಷ್ಟ್ರೀಯ ರಂಗ ಅಧಿಕಾರಕ್ಕೆ ಬಂದಾಗ ಎಲ್ಲ ಸಂಗಾತಿ ಪಕ್ಷಗಳು ಸೇರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಜಾರಿ ಮಾಡಿತ್ತು. ಈಗ ತೃತೀಯರಂಗ ಅಧಿಕಾರಕ್ಕೆ ಬರಲಿದ್ದು, ಅದೇ ರೀತಿ ಕಾರ್ಯಕ್ರಮ ತಂದು ಆಡಳಿತ ನಡೆಸಲಾಗುವುದು ಎಂದು ಹೇಳಿದರು.

ಕಾವೇರಿ ಮತ್ತು ಕೃಷ್ಣಾ ನದಿ ನೀರಿ ಹಂಚಿಕೆ ವಿಚಾರ ಮತ್ತು ಆರ್ಥಿಕ ಅನುದಾನ ನೀಡುವಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತಾಳಲಾಗಿದೆ. ಇದನ್ನು ಜನತೆ ಮುಂದೆ ಇಡಲಾಗುವುದು ಎಂದು ಟೀಕಾ ಪ್ರಹಾರ ನಡೆಸಿದರು.

ಅನ್ಯಾಯ: ರಾಜ್ಯಕ್ಕೆ ಕುಡಿಯುವ ನೀರಿಗಾದರೂ ಅವಕಾಶ ಕೊಡಿ ಎಂದು ಭಿಕ್ಷೆ ಬೇಡುವಂತಾಗಿದೆ. ಈ ವಿಷಯವನ್ನು ಪಾರ್ಲಿಮೆಂಟ್ ಒಳಗೂ ಹೇಳಿದ್ದೇನೆ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರಾಜ್ಯಕ್ಕೆ ಮಾಡಿದ ಘೋರ ಅನ್ಯಾಯಗಳನ್ನು ಪ್ರಚಾರದ ವೇಳೆ ಜನರ ಮುಂದಿಡಲಾಗುವುದು. ಜನರು ಇದನ್ನು ಒಪ್ಪಿ ಜೆಡಿಎಸ್ ಮತ ನೀಡುವ ವಿಶ್ವಾಸವಿದೆ. ಒಂದು ವೇಳೆ ನೀಡದಿದ್ದರೆ ಮುಂದಿನ ಪೀಳಿಗೆ 2 ರಾಷ್ಟ್ರೀಯ ಪಕ್ಷಗಳಿಂದ ಮತ್ತೊಮ್ಮೆ ತೊಂದರೆ ಈಡಾಗಬೇಕಾಗುತ್ತದೆ ಎಂದು ಗೌಡರು ಆತಂಕ ವ್ಯಕ್ತಪಡಿಸಿದರು.

ಯಾರು ಏನೇ ಹೇಳಲಿ, ಯಾವುದೇ ರೀತಿ ಸಮೀಕ್ಷೆ ನಡೆಸಲಿ, ಕೇಂದ್ರದಲ್ಲಿ ಈ ಬಾರಿ ತೃತೀಯ ರಂಗ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ