ಕೇಂದ್ರದಲ್ಲಿ ಸ್ಥಾನ ಸಿಗುತ್ತೆಂದು ನನ್ನ ಜೈಲಿಗೆ ಅಟ್ಟಿದ ಹೆಗ್ಡೆ: ಯಡಿಯೂರಪ್ಪ

ಮಂಗಳವಾರ, 15 ನವೆಂಬರ್ 2011 (11:50 IST)
ಕಾಂಗ್ರೆಸ್ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಕೇಂದ್ರದಲ್ಲಿ ಉನ್ನತ ಸ್ಥಾನ ಸಿಗುತ್ತದೆ ಎಂಬ ಆಸೆಯಿಂದ ನನ್ನನ್ನು ಜೈಲಿಗೆ ಕಳುಹಿಸಿದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸೋಮವಾರ ಶಿಕಾರಿಪುರದಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಗ್ಡೆ ಯಾರ ಒತ್ತಡಕ್ಕೆ ಮಣಿದು ನನ್ನ ಜೈಲಿಗೆ ಕಳುಹಿಸಿದರು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನೂ ಮುಕ್ತಮನಸ್ಸಿನಿಂದ ಹೇಳಿ ಎಂದು ತಿಳಿಸಿದರು.

ಗಣಿ ತನಿಖೆಯನ್ನು ಆರಂಭದಿಂದ ಮಾಡದೆ ಕೇವಲ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪನನ್ನು ತನಿಖೆ ಮಾಡಿದ್ದೀರಿ. ಯಾವುದೇ ನೋಟಿಸ್ ನೀಡದೆ ಕಚೇರಿಯಲ್ಲೇ ಕುಳಿತು ವರದಿ ನೀಡಿದ್ದೀರಿ. ಆಗಾಗ್ಗೆ ವರದಿಯ ಮುಖ್ಯಾಂಶಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದೀರಿ. ಇದರ ಹಿಂದಿನ ರಹಸ್ಯವೇನು ಎಂದು ಹೆಗ್ಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಲೋಕಾಯುಕ್ತ ಅಧಿಕಾರಿಗಳು ದೇವೇಗೌಡರ ಮಕ್ಕಳ ವಿರುದ್ಧ ದೂರಿನಲ್ಲಿ ತನಿಖೆ ನಡೆಸಲು ಒಂಬತ್ತು ತಿಂಗಳು ಬೇಕು ಎನ್ನುತ್ತಾರೆ. ಆದರೆ, ನನ್ನ ವಿರುದ್ಧದ ದೂರಿನಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಅವರಿಗೆ ಕೇವಲ ಒಂದು ತಿಂಗಳು ಸಾಕು. ಅಧಿಕಾರಿಗಳು ಇಂದಿಗೂ ದೇವೇಗೌಡ ಮತ್ತು ಮಕ್ಕಳ ಮಾತು ಕೇಳುತ್ತಾರೆ ಎಂದು ಯಡಿಯೂರಪ್ಪ ಆರೋಪಿಸಿದರು.

ನಾನು ಅಧಿಕಾರಿದಲ್ಲಿ ಇರುವಷ್ಟು ಕಾಲ ನನ್ನನ್ನು ಇಳಿಸುವುದೇ ಕೆಲವರ ಗುರಿಯಾಗಿತ್ತು. ಅದೂ ಆಯಿತು. ಜೈಲಿಗೆ ಕಳುಹಿಸುವ ಹುನ್ನಾರ ಇತ್ತು. ಆ ಆಸೆಯನ್ನೂ ಪೂರೈಸಿಕೊಂಡರು. ಆದರೆ ಅವರಿಗೆ ಇನ್ನೂ ಸಮಾಧಾನ ಇಲ್ಲ ಎಂದು ದೇವೇಗೌಡ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ