'ಕೈ' ಬಿಟ್ಟ ಮನೋರಮಾ ಮಧ್ವರಾಜ್ ಮತ್ತೆ ಬಿಜೆಪಿ ಪಾಳಯಕ್ಕೆ

ಬುಧವಾರ, 29 ಫೆಬ್ರವರಿ 2012 (13:48 IST)
PR
2008ರಲ್ಲಿ ಬಿಜೆಪಿ ವಿಪ್ ಉಲ್ಲಂಘಿಸಿ ಅಣು ಒಪ್ಪಂದ ಬೆಂಬಲಿಸಿದ್ದ ಮನೋರಮಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿತ್ತು. ನಂತರ ಕಾಂಗ್ರೆಸ್ ಪಾಳಯ ಸೇರಿದ್ದ ಮನೋರಮಾ ಮಧ್ವರಾಜ್ ಇದೀಗ ಮತ್ತೆ ಬುಧವಾರ ಬಿಜೆಪಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್‌ಗೆ ಗುಡ್ ಬೈ ಹೇಳಿರುವ ಹಿರಿಯ ನಾಯಕಿ ಮನೋರಮಾ ಇಂದು ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅನಂತ್ ಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಮನೋರಮಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದರು. ಆದರೆ 2008ರಲ್ಲಿ ಜುಲೈ 22ರಂದು ಸಂಸತ್‌ನಲ್ಲಿ ಅಣು ಒಪ್ಪಂದದ ಪರ ನಿಲುವು ತಳೆಯುವ ಮೂಲಕ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಬೆಂಬಲಿಸಿದ್ದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ಮನೋರಮಾ ಮಧ್ವರಾಜ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿತ್ತು.

ಬಳಿಕ 2009 ಜನವರಿ 21ರಂದು ಮಧ್ವರಾಜ್ ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕೈ ಪಾಳಯಕ್ಕೆ ಸೇರಿದ್ದರು.ಆ ಸಂದರ್ಭದಲ್ಲಿ ಮನೋರಮಾ ಮಧ್ವರಾಜ್ ಅವರು, ಬಿಜೆಪಿ ನಾಯಕರಿಂದ ಆದ ಅವಮಾನದಿಂದ ಬೇಸತ್ತು ಬಿಜೆಪಿಯನ್ನು ಬಿಡುತ್ತಿದ್ದೇನೆ. ಬಿಜೆಪಿಯಿಂದ ಆರಿಸಲ್ಪಟ್ಟಿರುವ ತಾನು ಲೋಕಸಭೆಗೆ ರಾಜೀನಾಮೆ ನೀಡಿದ್ದು, ಬಿಜೆಪಿ ಸಹವಾಸಕ್ಕೆ ಗುಡ್ ಬೈ ಹೇಳಿ,ಮತ್ತೆ 'ಕೈ' ಹಿಡಿಯುವುದಾಗಿ ಹೇಳಿದ್ದರು.

ಮನೋರಮಾ ಪಕ್ಷ ಬಿಟ್ಟಿದ್ದು ಒಳ್ಳೆದಾಯ್ತು: ಮನೋರಮಾ ಪಕ್ಷ ಬಿಟ್ಟರೆ ಬಿಜೆಪಿಗೆ ಒಳ್ಳೆಯದಾಗುತ್ತದೆ ಎಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರು ಅಂದು ಕೇಳಿದ್ದ ಪ್ರಶ್ನೆಗೆ ಚುಟುಕಾಗಿ ಈ ರೀತಿ ಉತ್ತರಿಸಿದ್ದನ್ನು ನೆನಪಿಸಿಕೊಳ್ಳಬೇಕು.

ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಗುಡ್ ಬೈ ಹೇಳುವ ಮೂಲಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮನೋರಮಾ ಪುತ್ರ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಉಡುಪಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ ಐದು ಬಾರಿ ಪ್ರತಿನಿಧಿಸಿ ಜಯಭೇರಿ ಬಾರಿಸಿದ್ದ ಮನೋರಮಾ ಅವರು ದೇವರಾಜ್ ಅರಸ್, ವೀರೇಂದ್ರ ಪಾಟೀಲ್, ಗುಂಡೂರಾವ್, ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಚಿವರಾಗಿದ್ದರು.

ವೆಬ್ದುನಿಯಾವನ್ನು ಓದಿ