ಕೋರ್ಟ್‌ನಲ್ಲೇ ಕಣ್ಣೀರಿಟ್ಟ ವೈ.ಸಂಪಂಗಿ; ಷರತ್ತುಬದ್ಧ ಜಾಮೀನು

ಸೋಮವಾರ, 31 ಅಕ್ಟೋಬರ್ 2011 (17:02 IST)
PR
ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಬಿಜೆಪಿ ಶಾಸಕ ವೈ.ಸಂಪಂಗಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಏತನ್ಮಧ್ಯೆ ಸಂಪಂಗಿ ಕೋರ್ಟ್‌ನಲ್ಲೇ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶಾಸಕ ವೈ.ಸಂಪಂಗಿ ಅವರು ಫಾರೂಕ್ ಎಂಬುವರಿಂದ ವಿಧಾನಸೌಧದಲ್ಲೇ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ನಂತರ ಅವರಿಗೆ ಜಾಮೀನು ಮಂಜೂರಾಗಿತ್ತು. ಆದರೆ ದೂರುದಾರ ಫಾರೂಕ್ ಮೇಲೆ ಸಂಪಂಗಿ ಪ್ರಭಾವ ಬೀರಲು ಯತ್ನಿಸಿರುವುದು ಹಾಗೂ ಜೀವ ಬೆದರಿಕೆ ಒಡ್ಡಿರುವುದಾಗಿ ಮತ್ತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಕೋರ್ಟ್ ಜಾಮೀನು ರದ್ದು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಂಪಂಗಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರು 2 ಶ್ಯೂರಿಟಿ, 1ಲಕ್ಷ ರೂಪಾಯಿ ಬಾಂಡ್ ಆಧಾರದ ಮೇಲೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

ಅಲ್ಲದೇ ಯಾವುದೇ ಕಾರಣಕ್ಕೂ ದೇಶಬಿಟ್ಟು ಹೋಗದಂತೆ ತಾಕೀತು ಮಾಡಿದ ನ್ಯಾಯಾಧೀಶರು, 3 ದಿನಗಳಲ್ಲಿ ಪಾಸ್‌ಫೋರ್ಟ್ ಅನ್ನು ಒಪ್ಪಿಸುವಂತೆ ಸೂಚಿಸಿದರು. ಸಾಕ್ಷಿಗಳನ್ನು ಬೆದರಿಸುವುದು, ಪ್ರಭಾವ ಬೀರುವ ಸಾಹಸಕ್ಕೆ ಕೈಹಾಕಬಾರದು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಈ ಸಂದರ್ಭದಲ್ಲಿ ಸಂಪಂಗಿ ಕೋರ್ಟ್ ಕಟಕಟೆಯಲ್ಲೇ ಕಣ್ಣೀರಿಟ್ಟ ಘಟನೆ ನಡೆಯಿತು. ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಯಿತು.

ಸಂಪಂಗಿ ಲಂಚ ಪುರಾಣ:
ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ 2009 ಜನವರಿ 29ರಂದು ಶಾಸಕರ ಭವನದಲ್ಲೇ ಐದು ಲಕ್ಷ ರೂಪಾಯ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲಂಚ ಪುರಾಣ ಬೆಳಕಿಗೆ ಬಂದಿತ್ತು. ಫಾರೂಕ್ ಎಂಬುವರಿಂದ ಶಾಸಕ ವೈ.ಸಂಪಂಗಿ ಅವರು 50 ಸಾವಿರ ನಗದು ಹಾಗೂ ಉಳಿದ ನಾಲ್ಕುವರೆ ಲಕ್ಷ ರೂಪಾಯಿಗಳ ಚೆಕ್ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಲಂಚ ಪಡೆಯುತ್ತಿದ್ದ ಆರೋಪದಡಿ ಲೋಕಾಯುಕ್ತ ಪೊಲೀಸರು ಸಂಪಂಗಿಯನ್ನು ಬಂಧಿಸುತ್ತಿದ್ದಂತೆಯೇ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮೈ-ಕೈ ನೋವು ಎಂದ ಶಾಸಕರನ್ನು ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ಜೈಲುವಾಸ ತಪ್ಪಿಸಿಕೊಳ್ಳಲು ಸಂಪಂಗಿ ನಾಟಕವಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿದ್ದ ನಡುವೆಯೇ ನಗರದ 24ನೇ ಹೆಚ್ಚುವರಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಹಾಗಾಗಿ ಸಂಪಂಗಿ ಜೈಲುವಾಸ ಅನುಭವಿಸದೆ ಜಾಮೀನು ಪಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ