ಖಾಸಗಿ ಚಾನೆಲ್‌ಗೆ ಗೇಟ್‌ಪಾಸ್?ಸೆಕ್ಸ್ ಫಿಲ್ಮ್ ವೀಕ್ಷಣೆ ಎಫೆಕ್ಟ್

ಬುಧವಾರ, 29 ಫೆಬ್ರವರಿ 2012 (11:12 IST)
PR
ವಿಧಾನಮಂಡಲದ ಕಲಾಪದ ವೇಳೆಯಲ್ಲೇ ಸಚಿವರು ಸೆಕ್ಸ್ ಫಿಲ್ಮ್ ವೀಕ್ಷಿಸಿ ಸರ್ಕಾರ ಮುಜುಗರಕ್ಕೀಡಾಗಿರುವುದರಿಂದ ಕಂಗಾಲಾಗಿರುವ ಆಡಳಿತರೂಢ ಬಿಜೆಪಿ ಸರ್ಕಾರ ಇದೀಗ ವಿಧಾನಮಂಡಲ ಕಲಾಪದ ನೇರ ಪ್ರಸಾರ ಮಾಡಲು ಖಾಸಗಿ ವಾಹಿನಿಗಳಿಗೆ ನೀಡಿದ್ದ ಅವಕಾಶವನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ.

ಸ್ಪೀಕರ್ ಕೆ.ಜಿ.ಬೋಪಯ್ಯ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆ ಬಳಿ ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡ, ಲೋಕಸಭೆಯಲ್ಲಿರುವಂತೆ ಪ್ರತ್ಯೇಕ ವಾಹಿನಿ ಆರಂಭಿಸಲು ಸರ್ಕಾರ ಸ್ಪಷ್ಟ ಧೋರಣೆ ಹೊಂದಿದೆ. ಸದನದ ಘನತೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಅಗತ್ಯ ಎನ್ನುವ ಮೂಲಕ ಭವಿಷ್ಯದಲ್ಲಿ ಖಾಸಗಿ ವಾಹಿನಿಗಳಿಗೆ ಗೇಟ್‌ಪಾಸ್ ನೀಡುವ ಸೂಚನೆ ನೀಡಿದ್ದಾರೆ.

ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಪ್ರಕರಣ ಸದನದ ಗೌರವಕ್ಕೆ ಚ್ಯುತಿ ತಂದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ವಾಹಿನಿ ಆರಂಭದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದ ಬ್ರಾಡ್ ಕಾಸ್ಟ್ ಎಂಜಿನಿಯರಿಂಗ್ ಅಂಡ್ ಕನ್ಸಲ್ಟೆಂಟ್ ಇಂಡಿಯಾ ಲಿ. ಅಧಿಕಾರಿಗಳು 17 ಕೋಟಿ ರೂ.ಗಳ ಮೊತ್ತದ ಪ್ರಸ್ತಾವನೆಯೊಂದನ್ನು ಸಭೆಯಲ್ಲಿ ಮಂಡಿಸಲು ಮುಂದಾಗಿದ್ದರು. ಕಲಾಪ ಪ್ರಸಾರಕ್ಕೆ ಬೇಕಾದ ತಾಂತ್ರಿಕ ವ್ಯವಸ್ಥೆ, ಸಿಬ್ಬಂದಿ ನೇಮಿಸಿಕೊಂಡು, ದೂರದರ್ಶನದ ಮೂಲಕ ಖಾಸಗಿ ವಾಹಿನಿಗಳಿಗೆ ಆಡಿಯೋ ದಾಖಲೆಗಳನ್ನು ರವಾನಿಸುವ ಮಾಹಿತಿ ಈ ಪ್ರಸ್ತಾವನೆಯಲ್ಲಿತ್ತು.

ವೆಚ್ಚ ಮತ್ತು ನಿರ್ವಹಣೆ ದೃಷ್ಟಿಯಿಂದ ಅಂತಹ ವ್ಯವಸ್ಥೆಯ ಸೃಷ್ಟಿ ಕಾರ್ಯಸಾಧ್ಯವಲ್ಲ ಎಂಬ ಚರ್ಚೆ ಕೂಡ ನಡೆಯಿತು. ಮುಂದಿನ ಸಭೆಗೆ ಸಮಗ್ರ ವರದಿಯೊಂದನ್ನು ಸಲ್ಲಿಸುವಂತೆ ಸ್ಪೀಕರ್ ಬಿಇಸಿಸಿಐಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಸಮಗ್ರ ಅಧ್ಯಯನ:
ಬಜೆಟ್ ಅಧಿವೇಶನ ಯಾವಾಗ ಎಂಬುದನ್ನು ಆಧರಿಸಿ ನವದೆಹಲಿ ಭೇಟಿ ನಿರ್ಧಾರವಾಗಲಿದೆ. 10-15 ದಿನದೊಳಗೆ ದೆಹಲಿಗೆ ಹೋಗಿ ಅಧ್ಯಯನ ನಡೆಸುವ ಸಾಧ್ಯತೆಯೂ ಇದೆ. ಇದೇನು ಹೊಸ ಪ್ರಸ್ತಾಪವಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆಯೇ ಈ ಬಗ್ಗೆ ಸಭೆ ಮಾಡಬೇಕಿತ್ತು. ಸೆಕ್ಸ್ ಫಿಲ್ಮ್ ವೀಕ್ಷಣೆ ಪ್ರಕರಣಕ್ಕೂ ಖಾಸಗಿ ವಾಹಿನಿ ಆರಂಭಕ್ಕೂ ಸಂಬಂಧವಿಲ್ಲ ಎಂದರು.

ಕಲಾಪ ನಡೆಯುತ್ತಿದ್ದಾಗ ಟಿವಿ ಕ್ಯಾಮೆರಾಮನ್, ಸದಸ್ಯರು ಪದೇ ಪದೇ ಓಡಾಡುವುದು ಕಲಾಪಕ್ಕೆ ಭಂಗ ತರುತ್ತದೆ. ಸದನದ ಘನತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆ ಸಹಿಸುವುದಿಲ್ಲ. ಖಾಸಗಿ ವಾಹಿನಿಗಳಿಗೆ ನಿರ್ಬಂಧ ವಿಧಿಸುವ ಯಾವುದೇ ಪ್ರಸ್ತಾಪವಿಲ್ಲ. ಮಾಧ್ಯಮದವರು ಸಲಹೆ ಕೊಟ್ಟರೆ, ವ್ಯವಸ್ಥೆ ಸುಧಾರಣೆಗೆ ಎಲ್ಲರೂ ಸೇರಿ ರೂಪುರೇಷೆ ಸಿದ್ದಪಡಿಸಬಹುದು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ