ಗಣಿಗಾರಿಕೆ ರದ್ದತಿ ಹಿಂದೆ ಸಿಎಂ ಕೈವಾಡ: ಡಿಕೆಶಿ

ಮಂಗಳವಾರ, 28 ಏಪ್ರಿಲ್ 2009 (18:02 IST)
NRB
ಕೇಂದ್ರ ಸರ್ಕಾರ ಬಳ್ಳಾರಿಯ ಗಡಿ ಭಾಗದ 5 ಕಂಪನಿಗಳ ಗಣಿಗಾರಿಕೆ ರದ್ದುಪಡಿಸಿ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಒತ್ತಾಯವೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜನಾರ್ದನ ರೆಡ್ಡಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಕೋರಿಕೆ ಆಧರಿಸಿ ಕೇಂದ್ರ ಸರ್ಕಾರವು 5 ಕಂಪನಿಗಳ ಗಣಿಗಾರಿಕೆ ಪರವಾನಿಗೆಯನ್ನು ರದ್ದುಪಡಿಸುವಂತೆ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಜನಾರ್ದನ ರೆಡ್ಡಿ ನಡುವೆ ಇರುವ ಭಿನ್ನಾಭಿಪ್ರಾಯ ಹೊಸದೇನಲ್ಲ, ರೆಡ್ಡಿ ಸಹೋದರರನ್ನು ಮಟ್ಟ ಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸತ್ಯವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಹಾಗೂ ಜೆಡಿಎಸ್ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸುತ್ತಿದ್ದಾರೆ. ಅಂತಹ ಅಕ್ರಮಗಳು ನಡೆದಿದ್ದರೆ ಸಿಬಿಐ ತನಿಖೆಯಾಗಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ