ಗಣಿ ಹಗರಣದ ತನಿಖೆಗೆ ಮಾರಿಷಸ್‌ಗೆ ಹಾರಿದ ಸಿಬಿಐ ತಂಡ

ಸೋಮವಾರ, 15 ಜುಲೈ 2013 (10:45 IST)
WD
WD
ಬೆಂಗಳೂರು: ಜನಾರ್ದನ ರೆಡ್ಡಿಯ ಗಣಿ ಅಕ್ರಮಗಳನ್ನು ಬಟಾಬಯಲುಗೊಳಿಸಲು ಪಣತೊಟ್ಟಂತೆ ಕಂಡುಬಂದಿರುವ ಸಿಬಿಐ ವಿದೇಶಗಳಲ್ಲೂ ಗಣಿ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಜನಾರ್ದನ ರೆಡ್ಡಿಯವರು ವಿದೇಶಗಳಲ್ಲಿ ಬೇನಾಮಿ ಕಂಪೆನಿಗಳನ್ನು ಸ್ಥಾಪಿಸಿ ಅಲ್ಲಿಗೆ ಕಬ್ಬಿಣ ಅದಿರನ್ನು ಸಾಗಿಸುತ್ತಿದ್ದರು.

ಎಎಂಸಿ(ಅಸೋಸಿಯೇಟೆಡ್ ಮೈನಿಂಗ್ ಕಂಪನಿ) ಪಾಲುದಾರ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ ಅವರ ಅಕ್ರಮ ವ್ಯವಹಾರಗಳನ್ನು ಪತ್ತೆಹಚ್ಚಲು ಸಿಬಿಐ ಅಧಿಕಾರಿಗಳ ತಂಡ ಮಾರಿಷಸ್‌ನಲ್ಲಿ ಬೀಡುಬಿಟ್ಟಿದೆ. ಸುಮಾರು 480 ಕೋಟಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ಮಾರಿಷಸ್‌ಗೆ ತೆರಳಿದ್ದಾರೆ ಎಂದು ಗೊತ್ತಾಗಿದೆ. ಜನಾರ್ದನ ರೆಡ್ಡಿ ಮಾರಿಷಸ್‌ನಲ್ಲಿ ಜೆಜೆಆರ್ ಹೋಲ್ಡಿಂಗ್ ಎಂಬ ಬೇನಾಮಿ ಕಂಪೆನಿಯನ್ನು ಸ್ಥಾಪಿಸಿ ಕಬ್ಬಿಣದ ಅದಿರನ್ನು ಆ ಕಂಪೆನಿಗೆ ಮಾರಾಟ ಮಾಡುತ್ತಿದ್ದರು.

ರಫ್ತು ಶುಲ್ಕ ತಪ್ಪಿಸುವ ದೃಷ್ಟಿಯಿಂದ ರೆಡ್ಡಿ ಬೇನಾಮಿ ಕಂಪೆನಿಗಳನ್ನು ಸ್ಥಾಪಿಸಿದರು ಎಂದು ಸಿಬಿಐ ಆಪಾದಿಸಿದೆ. ಸಿಂಗಪುರದಲ್ಲಿ ಕೂಡ ರೆಡ್ಡಿ ಜಿಎಲ್‌ಎ ಎಂಬ ಬೇನಾಮಿ ಕಂಪೆನಿಯನ್ನು ಸ್ಥಾಪಿಸಿ ಅದಿರು ಮಾರಾಟ ಮಾಡಿದ್ದಾರೆ. ಈ ಬೇನಾಮಿ ಕಂಪೆನಿಗಳಿಂದ ಕಬ್ಬಿಣ ಅದಿರನ್ನು ಇತರೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದರು. ಜನಾರ್ದನ ರೆಡ್ಡಿ ಗಣಿಗಾರಿಕೆಯಿಂದ ಬಂದ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಅಪಾರ ಮೊತ್ತದಲ್ಲಿ ಹೂಡಿಕೆ ಮಾಡಿದ್ದಾರೆಂದು ತಿಳಿದುಬಂದಿದೆ.

ಸ್ವಿಸ್ ಬ್ಯಾಂಕ್‌ಗಳು ಖಾತೆಗಳ ಗೋಪ್ಯತೆ ಕಾಪಾಡುವ ಹಿನ್ನೆಲೆಯಲ್ಲಿ ರೆಡ್ಡಿಯವರ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆಯುವುದು ಸಿಬಿಐಗೆ ಕಷ್ಟವಾಗಿದೆ. ಸಿಬಿಐ ವಿದೇಶಗಳಲ್ಲಿ ರೆಡ್ಡಿ ಹೊಂದಿರುವ ಬೇನಾಮಿ ಕಂಪೆನಿಗಳು ಮತ್ತು ಖಾತೆಗಳ ಬಗ್ಗೆ ಮಾಹಿತಿ ಪಡೆಯಲು ತನಿಖೆಗೆ ಅನುಮತಿ ಕೋರಿತ್ತು. ಈ ಹಿನ್ನೆಲೆಯಲ್ಲಿ ಮಾರಿಷಸ್‌ನಲ್ಲಿ ತನಿಖೆಗೆ ಅನುಮತಿ ಸಿಕ್ಕಿದ್ದು, ಸಿಂಗಾಪೂರ್, ಸ್ವಿಜರ್ಲೆಂಡ್‌ಗಳಲ್ಲಿ ಇನ್ನೂ ಅನುಮತಿ ಪಡೆಯಬೇಕಾಗಿದೆ.

ವೆಬ್ದುನಿಯಾವನ್ನು ಓದಿ