ಗದ್ದುಗೆ ರಾಜಕಾರಣ,ಜನರ ಕಷ್ಟ ಕೇಳೋರು ಯಾರು?: ಸಿದ್ದರಾಮಯ್ಯ

ಮಂಗಳವಾರ, 27 ಮಾರ್ಚ್ 2012 (12:20 IST)
PR
ಬರ ಪರಿಹಾರ ಕಾಮಗಾರಿ, ಜನರ ಸಂಕಷ್ಟಗಳ ಬಗ್ಗೆ ಗಮನಕೊಡಬೇಕಾದ ಸಚಿವರು, ಶಾಸಕರು ಮುಖ್ಯಮಂತ್ರಿ ಕುರ್ಚಿಗಾಗಿ ದೆಹಲಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

123 ತಾಲೂಕುಗಳಲ್ಲಿ ಇರುವ ಬರ ಪರಿಸ್ಥಿತಿ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇವಿಲ್ಲದೆ ರೈತರು ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗೋಶಾಲೆಗಳನ್ನು ತೆರೆದು ಮೇವು ಒದಗಿಸುವ ಪ್ರಯತ್ನ ನಡೆದಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಲವು ಕಡೆಗಳಲ್ಲಿ ಉದ್ಭವಿಸಿದೆ. ವಿದ್ಯುತ್ ಇಲ್ಲ, ಕೊಳವೆ ಬಾವಿಯಲ್ಲೂ ನೀರಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಾಗುವ ಹಣ ಸದುಪಯೋಗ ಪಡಿಸಿಕೊಂಡಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡಬೇಕಾದ ಪಶುಸಂಗೋಪನೆ ಸಚಿವ ರೇವೂ ನಾಯಕ ಬೆಳಮಗಿ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದರು. ಜನರ ಕಾಟ ತಪ್ಪಿಸಿಕೊಳ್ಳಲು ರೆಸಾರ್ಟ್‌ಗೆ ಬಂದಿರುವುದಾಗಿ ಹೇಳಿಕೆ ಕೊಟ್ಟಿದ್ದರು. ಜವಾಬ್ದಾರಿ ಇಲ್ಲದ ಸಚಿವರನ್ನ ನೋಡಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಹಾರ ಕಾಮಗಾರಿ ನಡೆಸಿದ್ದೇವೆ, ಯಾವುದೇ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳುತ್ತಾರೆ. ಆದರೆ ಪಾಪ ಅವರು ಸಿಎಂ ಕುರ್ಚಿ ಉಳಿಸಿಕೊಳ್ಳಲು ಗಮನಕೊಟ್ಟಿದ್ದಾರೆಯೇ ವಿನಃ ಬೇರೇನೂ ಮಾಡಿಲ್ಲ. ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಶಾಸಕರು, ಸಚಿವರು ದೆಹಲಿ ಪ್ರಯಾಣ ಮಾಡಿ ಲಾಬಿ ಮಾಡುತ್ತಿದ್ದಾರೆ ಎಂದು ದೂರಿದರು.

ವೆಬ್ದುನಿಯಾವನ್ನು ಓದಿ