ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆಯಲ್ಲಿ ಇಳಿಮುಖವಾಗಿಲ್ಲ

ಶುಕ್ರವಾರ, 7 ಜೂನ್ 2013 (09:52 IST)
PR
PR
ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ನಿರ್ಬಂಧಿಸಿದ್ದರೂ ಮಾರುಕಟ್ಟೆ ಅಡಿಕೆ ಬೆಲೆಯಲ್ಲಿ ಯಾವುದೇ ಗಮನಾರ್ಹ ಇಳಿಮುಖವಾಗಿಲ್ಲ. ಮುಂದಿನ ದಿನಗಳಲ್ಲಿ ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾದರೆ ಹಲ ಯೋಜನೆಗಳ ಮೂಲಕ ಅಡಿಕೆ ಬೆಳೆಗಾರರಿಗೆ ಇನ್ನೂ ಉತ್ತಮವಾದ ಕಾರ್ಯಕ್ರಮಗಳ ಮೂಲಕ ಇಲಾಖೆ ಬೆಂಬಲಿಸಲಿದೆ ಎಂದು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಹಾರ ಕಾಯಿದೆ ಅಡಿ ಅಡಿಕೆಯನ್ನು ಆಹಾರದ ಬೆಳೆ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಆಹಾರ ಪದಾರ್ಥಗಳಲ್ಲಿ ಯಾವುದೇ ಕಾರಣದಿಂದ ನಿಕೋಟಿನ್ ತಂಬಾಕಿನ ಅಂಶ ಇರಬಾರದೆಂದು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಗುಟ್ಕಾ ಪಾನ್ ಮಸಾಲಗಳನ್ನು ಈಗಾಗಲೇ ಉಚ್ಛ ನ್ಯಾಯಾಲಯದ ಆದೇಶಾನುಸಾರ ನಿಷೇಧಿಸಿದೆ. ತಡವಾದರೂ ಕರ್ನಾಟಕವೂ ಸಹ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಗುಟ್ಕಾ ಮತ್ತು ಪಾನ್ ಮಸಾಲಾ ನಿರ್ಬಂಧವನ್ನುನ್ಯಾಯಾಲಯದ ಆದೇಶದಂತೆ ಜಾರಿಗೊಳಿಸಿದೆ ಎಂದು ಸಚಿವರುಗಳು ಅಭಿಪ್ರಾಯಪಟ್ಟರು.

PR
PR
ರೋಗಪೀಡಿತ ಅಡಿಕೆ ತೋಟಗಳಲ್ಲಿ ರೋಗ ನಿರೋಧಕಗಳನ್ನು ಅಳವಡಿಸಲು ರೈತರಿಗೆ ಪ್ರತಿ ಹೆಕ್ಟೇರ್ ಗೆ 15,000 ರೂ.ಸಹಾಯಧನ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ನೀಡಲಾಗುತ್ತಿದೆ. 2011-12 ನೇ ಸಾಲಿನಲ್ಲಿ 3233 ಹೆಕ್ಟೇರ್ ಬೆಳೆ ಪುನಶ್ಚೇತನ ಕೈಗೊಳ್ಳಲು 574.18 ಲಕ್ಷ ರೂ.ಗಳ ಸಹಾಯಧನವನ್ನು ರೈತರಿಗೆ ಒದಗಿಸಲಾಗಿದೆ. ಅಡಿಕೆ ಬೆಳೆಯಲ್ಲಿ ಅಂತರ ಬೆಳೆ ಬೆಳೆಗಳಾದ ಕಾಳು ಮೆಣಸು, ಲವಂಗ, ಜಾಜಿ ಕಾಯಿ ಮತ್ತು ಬಹುವಾರ್ಷಿಕ ಬೆಳೆಗಳಿಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಲ್ಲಿ ಪ್ರತಿ ಹೆಕ್ಟೇರ್ ಗೆ 20,000 ರೂ.ಗಳ ಸಹಾಯಧನ ನೀಡಲಾಗುತ್ತಿದೆ ಎಂದರು.

ಇದೇ ಯೋಜನೆಯಲ್ಲಿ ಅಡಿಕೆ ಬೆಳೆಗೆ ತಗಲುವ ಪ್ರಮುಖ ಕೀಟ ಮತ್ತು ರೋಗಗಳ ಹತೋಟಿಗಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಖರೀದಿಸಲು ಪ್ರತಿ ಹೆಕ್ಟೇರ್ ಗೆ 1,000 ರೂ. ನಿಂದ 2,000 ವರೆಗೆ ನೀಡಲಾಗುತ್ತಿದೆ. ಅಡಿಕೆ ಪರ್ಯಾಯ ಬೆಳೆ ಬೆಳೆಯಲು ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ. ಅನುದಾನದಲ್ಲಿ ಪ್ರಾತ್ಯಕ್ಷಿಕೆಗಳನ್ನು 6 ಮಲೆನಾಡು ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ