ಗೋ ಹತ್ಯೆ ನಿಷೇಧ: ರಾಜ್ಯಪಾಲರ ವಿರುದ್ಧ ಪ್ರತಿಭಟನೆ

ಶನಿವಾರ, 4 ಸೆಪ್ಟಂಬರ್ 2010 (20:36 IST)
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕವನ್ನು ಜಾರಿಗೊಳಿಸುವಂತೆ ವಿಧಾನಮಂಡಲದಲ್ಲಿ ಅಂಗೀಕರಿಸಿ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ರಾಜ್ಯ ಸರಕಾರ ಕಳುಹಿಸಿಕೊಟ್ಟಿದ್ದರು ಕೂಡ ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿ ಶನಿವಾರ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿರುವ ವಿಧೇಯಕವನ್ನು ರಾಜ್ಯಪಾಲರು ಪುನಃ ತರಿಸಿ ಅದಕ್ಕೆ ಅಂಕಿತ ಹಾಕಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಅದೇ ರೀತಿ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನ ಸಮೀಪ ಬಿಜೆಪಿ ಕಾರ್ಯಕರ್ತರು ಗೋ ಹತ್ಯೆ ನಿಷೇಧಕ್ಕೆ ರಾಜ್ಯಪಾಲರು ಅಂಕಿತ ಹಾಕದೆ ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿರುವುದನ್ನು ಪ್ರತಿಭಟಿಸಿ, ಘೋಷಣೆ ಕೂಗಿದರು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಕೂಡಲೇ ಜಾರಿಯಾಗಲೇಬೇಕು. ರಾಜ್ಯಪಾಲರು ಕಾಂಗ್ರೆಸ್ ಪಕ್ಷದ ಏಜೆಂಟ್ ರೀತಿ ವರ್ತಿಸುವುದನ್ನು ಕೈಬಿಡಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಗೋ ಹತ್ಯೆ ನಿಷೇಧ ವಿಧೇಯಕ ಜಾರಿ ವಿಳಂಬವಾಗುತ್ತಿರುವುದು ಹಾಗೂ ರಾಜ್ಯಪಾಲರ ಧೋರಣೆಯನ್ನು ಖಂಡಿಸಿ ರಾಜ್ಯದ ಇತರೆಡೆಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವೆಬ್ದುನಿಯಾವನ್ನು ಓದಿ