ಘಟಪ್ರಭಾ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲು

ಶುಕ್ರವಾರ, 18 ಜುಲೈ 2008 (15:30 IST)
ಸಚಿವ ಬಾಲಚಂದ್ರ ಜಾರಕಿಹೋಳಿ ಅವರ ಅಧ್ಯಕ್ಷತೆಯ ಘಟಪ್ರಭಾ ಸಕ್ಕರೆ ಕಾರ್ಖಾನೆಯು 2 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿರುವುದರಿಂದ ತೆರಿಗೆ ಇಲಾಖೆಯು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದೆ. ಗೋಕಾಕ್‌ನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬೆಳಗಾವಿ ಮಾರಾಟ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಮೊಕದ್ದಮೆ ಹೂಡಿದ್ದಾರೆ.

ಪ್ರಕರಣಕ್ಕೆ ರಾಜಕೀಯ ಲೇಪ ಬಂದಿದ್ದು, ಜೆಡಿಎಸ್ ಅಧ್ಯಕ್ಷ ಅರವಿಂದ ದಳವಾಯಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಸಚಿವ ಬಾಲಚಂದ್ರ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರೀ ಅವ್ಯವಹಾರ ನಡೆಸಲಾಗಿದೆ. ತೆರಿಗೆ ನೀಡಡಿರುವುದರ ಹಿಂದೆ ಅವರ ಪಾತ್ರವೂ ಇದೆ ಎಂದರು.

ಕಾರ್ಖಾನೆಯಲ್ಲಿ ದುಡಿಯುವ ನೌಕರರಿಗೆ 11 ತಿಂಗಳಿನಿಂದ ಸಂಬಳ ನೀಡಿಲ್ಲ. ಅವರ ಪಿಎಫ್, ವಿಮೆ ಪ್ರೀಮಿಯಂ ತುಂಬಿಲ್ಲ. ಸುಮಾರು 200 ಕೋಟಿ ಅವ್ಯವಹಾರ ನಡೆಸಲಾಗಿದೆ. ಆದುದರಿಂದ ಸಚಿವ ಜಾರಕಿಹೋಳಿ ರಾಜೀನಾಮೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದರು.

ಕಬ್ಬು ಸರಬರಾಜು ಮಾಡಿದ ರೈತರಿಗೆ 30 ಕೋಟಿ ರೂ. ಬಾಕಿ ನೀಡಬೇಕಾಗಿದೆ. ಆದರೂ ತಪ್ಪುಗಳನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಹೊರಿಸಿ ತಪ್ಪಿಸಿಕೊಳ್ಳಲು ಹೊಂಚು ಹಾಕುತ್ತಿದ್ದಾರೆ.

ಯಡಿಯೂರಪ್ಪನವರು ಇತ್ತೀಚೆಗೆ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆ ನಡೆಸಿ ರೈತರಿಗೆ ಕಿರುಕುಳ ನೀಡಬೇಡಿ ಎಂದು ಎಚ್ಚರಿಸಿದ್ದರು. ನಿಜವಾಗಿಯೂ ಅವರು ಈ ಮಾತನ್ನು ಉಳಿಸಿಕೊಳ್ಳಬೇಕಾದರೆ ಬಾಲಚಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ದಳವಾಯಿ ಎಂದು ಆಗ್ರಹಿಸಿದ್ದಾರೆ.

ಒಂದು ವಾರದಲ್ಲಿ ಕ್ರಮ ಜರುಗಿಸದಿದ್ದರೆ ಲೋಕಾಯುಕ್ತರಿಗೆ ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ದಳವಾಯಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ