ಚಂದ್ರಕಾಂತ್ ಬೆಲ್ಲದ್ ಮುಖಕ್ಕೆ ಮಸಿ; ಪಿಎಸ್ಐ ಅಮಾನತು

ಸೋಮವಾರ, 29 ನವೆಂಬರ್ 2010 (11:59 IST)
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಯುವ ಕಾಂಗ್ರೆಸ್ ಮುಖಂಡರು ಮಸಿ ಬಳಿದ ಘಟನೆ ಜನರ ನೆನಪಿನಿಂದ ಮಾಸುವ ಮುನ್ನವೇ ಇದೀಗ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರ ಮುಖಕ್ಕೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಸಿ ಬಳಿದ ಘಟನೆ ಭಾನುವಾರ ನಡೆದಿದೆ.

ಜಿಲ್ಲೆಯ ವಿವಿಧ ತಾಲೂಕಿನ ಗಡಿ ಭಾಗದಲ್ಲಿ ಭಾನುವಾರದಿಂದ ಪ್ರವಾಸ ಕೈಗೊಂಡಿರುವ ಬೆಲ್ಲದ್ ಅವರು ಭಾನುವಾರ ಮಧ್ಯಾಹ್ನ ನಗರದ ಹಬ್ಸಿಕೋರ್ಟ್ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸುವ ನೆಪದಲ್ಲಿ ಆಗಮಿಸಿದ್ದ ನವ ನಿರ್ಮಾಣ ಸೇನೆ ಕಾರ್ಯಕರ್ತರು ಬೆಲ್ಲದ್ ಅವರ ಮುಖಕ್ಕೆ ಮಸಿ ಬಳಿದು ಪರಾರಿಯಾಗಿದ್ದರು. ಪೊಲೀಸರು ಕೂಡ ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಸಂಘಟನೆಯ ಜಿಲ್ಲಾಧ್ಯಕ್ಷ ವಿಠಲ್ ಗಾಯಕವಾಡ, ಪ್ರಮುಖರಾದ ಹರೀಶ, ಪ್ರಕಾಶ ಕಪಲಾಪೂರಕರ್ ಹಾಗೂ ಸುನೀಲ ಎಂಬವರನ್ನು ಬಂಧಿಸಲಾಗಿದೆ. ಜಿಲ್ಲಾಧ್ಯಕ್ಷ ಚಂದ್ರಕಾಂತ ಕಟ್ಟಿಮನಿ, ವಿಭಾಗ ಪ್ರಮುಖ ಶ್ರೀಧರ ರೆಡ್ಡಿ ಪರಾರಿಯಾಗಿದ್ದು, ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೇ ಪ್ರಾಧಿಕಾರದ ಅಧ್ಯಕ್ಷರಿಗೆ ಸೂಕ್ತ ಭದ್ರತೆ ಒದಗಿಸದ ಹಿನ್ನೆಲೆಯಲ್ಲಿ ಮಾರ್ಕೆಟ್ ಠಾಣೆ ಪಿಎಸ್ಐ ಅಲಿಸಾಬ್, ಎಎಸ್ಐ ನಾಗ ಶೆಟ್ಟಿ, ಎಸ್ಕಾರ್ಟ್ ಪಿಎಸ್ಐ ಶಾಂತಕುಮಾರ ಮತ್ತು ಪೇದೆ ರಾಜೇಶ ಚಲುವಾರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಸತೀಶ ಕುಮಾರ್ ಆದೇಶ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ