ಚಂದ್ರಯಾನ-1 ಯೋಜನೆಗೆ ಹಠಾತ್ ತೆರೆ

ಭಾನುವಾರ, 30 ಆಗಸ್ಟ್ 2009 (10:13 IST)
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆಯಾದ ಚಂದ್ರಯಾನ-1 ಶನಿವಾರ ಹಠಾತ್ ಅಂತ್ಯಕಂಡಿದೆ. ಗಗನನೌಕೆಯ ಜತೆ ಇಸ್ರೊ ಸಂಪರ್ಕ ಕಳೆದುಕೊಂಡಿದ್ದರಿಂದ ನೌಕೆಯನ್ನು ಉಡಾಯಿಸಿ 10 ತಿಂಗಳು ಗತಿಸಿದ ಬಳಿಕ ಇಸ್ರೊ ಕನಸು ನನಸಾಗುವಲ್ಲಿ ವಿಫಲವಾಯಿತು. 2 ವರ್ಷಗಳವರೆಗೆ ಚಾಲನೆಯಲ್ಲಿರಬೇಕಿದ್ದ ಈ ಯೋಜನೆ ಖಚಿತವಾಗಿ ಮುಗಿದಿದೆ.

ನಾವು ಅಂತರಿಕ್ಷ ನೌಕೆಯ ಜತೆ ಸಂಪರ್ಕ ಕಳೆದುಕೊಂಡಿದ್ದೇವೆ ಎಂದು ಚಂದ್ರಯಾನ-1 ಯೋಜನೆಯ ಯೋಜನಾ ನಿರ್ದೇಶಕ ಎಂ.ಅಣ್ಣಾದುರೈ ವರದಿಗಾರರಿಗೆ ತಿಳಿಸಿದರು.ಎಲ್ಲಿ ತಪ್ಪಾಗಿದೆಯೆಂದು ವಿಜ್ಞಾನಿಗಳು ವಿಶ್ಲೇಷಣೆ ನಡೆಸಿದ್ದು, ಚಂದ್ರಯಾನ ಯೋಜನೆ ಮತ್ತೆ ಚೇತರಿಸಿಕೊಳ್ಳುವ ಬಗ್ಗೆ ಪ್ರಯತ್ನ ನಡೆಸಿದ್ದಾರೆಂದು ಇಸ್ರೊ ಅಧ್ಯಕ್ಷ ಮಾಧವನ್ ನಾಯರ್ ತಿಳಿಸಿದರು.

ಆದಾಗ್ಯೂ, ಯೋಜನೆಯ ವೈಜ್ಞಾನಿಕ ಉದ್ದೇಶಗಳಲ್ಲಿ ಶೇ.95 ಸಂಪೂರ್ಣವಾಗಿದೆಯೆಂದು ಅವರು ಉದ್ಗರಿಸಿದರು.ಕಳೆದ ವರ್ಷ ಅಕ್ಟೋಬರ್ 22ರಂದು ಅತೀ ಆಡಂಬರದೊಂದಿಗೆ ಆರಂಭಿಸಲಾದ ಎರಡು ವರ್ಷಗಳ ಯೋಜನೆಯು ಬಾಹ್ಯಾಕಾಶ ನೌಕೆಯ ಜತೆ ರೇಡಿಯೊ ಸಂಪರ್ಕ ತಪ್ಪಿದ್ದರಿಂದ ಬಹುತೇಕ ಅಂತ್ಯಗೊಂಡಿದೆ.

ಚಂದ್ರಯಾನ-1 ಬಾಹ್ಯಾಕಾಶ ನೌಕೆಯನ್ನು ಪಿಎಸ್‌ಎಲ್‌ವಿ-ಸಿ11 ರಾಕೆಟ್‌‍ನಿಂದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗಿದ್ದು, ಚಂದ್ರನ ಸುತ್ತ ಕಕ್ಷೆಯಲ್ಲಿ 3400 ಬಾರಿ ಪ್ರದಕ್ಷಿಣೆ ಹಾಕಿರುವ ನೌಕೆ, ಅತ್ಯಾಧುನಿಕ ಸೆನ್ಸರ್‌ಗಳಿಂದ ಭಾರೀ ಪ್ರಮಾಣದ ಅಂಕಿಅಂಶಗಳನ್ನು, ಚಿತ್ರಗಳನ್ನು ರವಾನಿಸಿತ್ತು.

ವೆಬ್ದುನಿಯಾವನ್ನು ಓದಿ