ಚೊಚ್ಚಲ ಬಜೆಟ್‌ನಲ್ಲಿ ಎಲ್ಲಾ ವರ್ಗಗಳಿಗೆ ಆದ್ಯತೆ ನೀಡಿರುವೆ:ಶೆಟ್ಟರ್

ಶುಕ್ರವಾರ, 8 ಫೆಬ್ರವರಿ 2013 (17:08 IST)
PR
PR
ಇಂದು ಬೆಳಿಗ್ಗೆ 12-30 ರಿಂದ ಸತತ 4 ಗಂಟೆಗಳ ಕಾಲ ಸುಮಾರು 160 ಪುಟಗಳ ತಮ್ಮ ಚೊಚ್ಚಲ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಂತರ ವಿಧಾನಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ತಮ್ಮ ಚೊಚ್ಚಲ ಬಜೆಟ್‌ನಲ್ಲಿ ರಾಜ್ಯದ ಎಲ್ಲ ವರ್ಗದ ಜನತೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದ್ದಾರೆ.

ತಜ್ಞರ ಸಲಹೆಯಂತೆ ಸುಗಮ ಆಡಳಿತ ನಡೆಸಲು ಅನುಕೂಲವಾಗುವ ಸಲುವಾಗಿ ನೂತನ ತಾಲೂಕುಗಳ ರಚನೆ ಮಾಡಲಾಗಿದ್ದು ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದ ಶೆಟ್ಟರ್, ರಾಜ್ಯದ ಬಡ ವರ್ಗಕ್ಕೆ ನೆರವಾಗುವ ಉದ್ದೇಶದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ 2 ರೂ.ಗೆ ಕೆ.ಜಿ. ಅಕ್ಕಿ ನೀಡುವ ತೀರ್ಮಾನ ಪ್ರಕಟಿಸಿದ್ದು ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಮ್ಮ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಸಮಾಜದ ಅಭಿವೃದ್ದಿಗೆ ಪ್ರಾಶಸ್ತ್ಯ ನೀಡಿರುವುದಾಗಿ ತಿಳಿಸಿದ ಶೆಟ್ಟರ್, ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯದ ಎಲ್ಲ ಭಾಗಗಳಿಗೂ ಆದ್ಯತೆ ನೀಡಿ ಪ್ರಸಕ್ತ ಬಜೆಟ್‌ನಲ್ಲಿ ಸಮತೋಲನ ಕಾಯ್ದುಕೊಂಡಿರುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಆಕಾಶ್ ಟ್ಯಾಬ್ಲೆಟ್ ನೀಡುವ ಯೋಜನೆಯಿಂದ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳೂ ಮಾಹಿತಿ ತಂತ್ರಜ್ಞಾನದ ನೆರವು ಪಡೆದು ಉನ್ನತಿ ಸಾಧಿಸಲು ನೆರವಾಗುತ್ತದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ