ಜಂಬೂ ಸವಾರಿಯೊಂದಿಗೆ 'ದಸರಾಕ್ಕೆ ತೆರೆ'

ಗುರುವಾರ, 9 ಅಕ್ಟೋಬರ್ 2008 (19:23 IST)
News RoomNRB
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಆಕರ್ಷಕ ಜಂಬೂ ಸವಾರಿಯೊಂದಿಗೆ ಲಕ್ಷಾಂತರ ಪ್ರವಾಸಿಗರ ಮನಸೂರೆಗೊಳ್ಳುವ ಮೂಲಕ ಗುರುವಾರ ರಾತ್ರಿ ಹತ್ತು ದಿನಗಳ ಕಾಲ ನಡೆದ ನಾಡಹಬ್ಬ ಜಾನಪದ ಕಲಾವಿದರ ವೈವಿಧ್ಯಮಯ ಕಲಾ ಪ್ರದರ್ಶನದೊಂದಿಗೆ ಅದ್ದೂರಿಯಾಗಿ ನಡೆಯುವ ಮೂಲಕ ತೆರೆ ಬಿದ್ದಿದೆ.

ಅಲ್ಲದೇ ಜಂಬೂ ಸವಾರಿ ಹೊರಡುವ ಮುನ್ನ ನಡೆದ ವಜ್ರಮುಷ್ಠಿ ಕಾಳಗ ಕೂಡ ಜನಮನವನ್ನು ಸೆಳೆಯಿತು.ಅರಮನೆ ಒಳಾಂಗಣದಲ್ಲಿ ಕರಿಕಲ್‌ದೊಡ್ಡಿ ಆವರಣದಲ್ಲಿ ಏರ್ಪಡಿಸಿದ್ದ ಜಟ್ಟಿ ಕಾಳಗದ ವೇಳೆ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಉಪಸ್ಥಿತರಿದ್ದರು.

ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗಕ್ಕೆ ಚಾಮರಾಜನಗರ ಮತ್ತು ಮೈಸೂರಿನ ತಲಾ ಇಬ್ಬರು ಜಟ್ಟಿಗಳು ಪಾಲ್ಗೊಂಡಿದ್ದರು. ಜಟ್ಟಿಗಳು ಪ್ರಾಣಿಗಳ ಕೃತಕ ಉಗುರುಗಳನ್ನು ಧರಿಸಿ ಕಾಳಗಕ್ಕೆ ಇಳಿಯುತ್ತಾರೆ. ಆ ಉಗುರುಗಳು ಒಬ್ಬ ಜಟ್ಟಿಗೆ ಹೊಡೆದು ರಕ್ತ ಬಂದ ಕೂಡಲೇ ಕಾಳಗವನ್ನು ನಿಲ್ಲಿಸಲಾಗುತ್ತದೆ.

ಖಾಸಗಿ ದರ್ಬಾರ್ ಅಂತ್ಯ:ವಜ್ರ ಮುಷ್ಠಿ ಕಾಳಗದ ಬಳಿಕ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಅವರು ಸಾರೋಟ್‌ನಲ್ಲಿ ಕುಳಿತು ಸಾಂಪ್ರದಾಯಿಕ ವಾದ್ಯ ಮೇಳದೊಂದಿಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಅಲ್ಲಿಗೆ ಖಾಸಗಿ ದರ್ಬಾರ್ ಅಂತ್ಯಗೊಂಡಿತು.

ಮಧ್ನಾಹ್ನ 12.50ಕ್ಕೆ ಅರಮನೆ ಮುಂಭಾಗದಲ್ಲಿ ನಂದಿಧ್ವಜಕ್ಕೆ ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸುಮಾರು 2 ಕಿ.ಮೀ.ವರೆಗಿನ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
NRB


ತಾಯಿ ಚಾಮುಂಡೇಶ್ವರಿ ವಿಗ್ರಹದೊಂದಿಗೆ ಸುಮಾರು 750ಕೆಜಿ ಭಾರದ ಚಿನ್ನದ ಅಂಬಾರಿಯನ್ನು ಹೊತ್ತ 50ರ ಹರೆಯದ ಬಲರಾಮ ತನ್ನ ಇಕ್ಕೆಲಗಳಲ್ಲಿದ್ದ 'ಸರಳಾ'ಮತ್ತು 'ರೇವತಿ'ಯರ ನಡುವೆ ಗಜಗಾಂಭಿರ್ಯದಿಂದ ಬನ್ನಿಮಂಟಪದವರೆಗೆ ಹೆಜ್ಜೆ ಹಾಕುವ ಮೂಲಕ ನೆರೆದ ಜನಸ್ತೋಮಕ್ಕೆ ಹೆಚ್ಚಿನ ಮೆರುಗನ್ನು ನೀಡಿತು.

ಮೆರವಣಿಗೆಯಲ್ಲಿ 40ಜಾನಪದ ಕಲಾತಂಡಗಳು, 50ಸ್ತಬ್ಧ ಚಿತ್ರಗಳು, ಸಾಂಸ್ಕೃತಿಕ ಕಲೆ, ಸಂಗೀತಗಳು ಹೆಚ್ಚಿನ ಮೆರುಗು ನೀಡಿತ್ತು.ಅಲ್ಲದೇ ಹಿಂದೆಂದೂ ಕಂಡಿರಿಯದಷ್ಟು ಬಿಗು ಬಂದೋಬಸ್ತ್ ಅನ್ನು ಏರ್ಪಡಿಸಲಾಗಿತ್ತು. ವಿವಾದಿತ ಬೋಪೊರ್ಸ್ ಗನ್, ಟಿ72 ಟ್ಯಾಂಕ್ಸ್ ಹಾಗೂ ಇನ್ನಿತರ ಮಿಲಿಟರಿ ಶಸ್ತ್ರಾಸ್ತ್ರಗಳು ಮುನ್ನೆಚ್ಚರಿಕೆ ಅಂಗವಾಗಿ ಮೈಸೂರಿಗೆ ತರಲಾಗಿತ್ತು.

ಮೈಸೂರು ದಸರಾದ ವೈಭವನ್ನು ದೇಶದ ಹೊರಗು ಪ್ರಚಾರ ಮಾಡುವ ನಿಟ್ಟಿನಲ್ಲಿ ನಾಡಹಬ್ಬ ಎಂದು ಈಗಾಗಲೇ ಸರ್ಕಾರ ಘೋಷಿಸಿದ್ದು, ಆ ನಿಟ್ಟಿನಲ್ಲಿ ದಸರಾಕ್ಕೆ ಅಧುನಿಕವಾಗಿ ಆಕರ್ಪಣೆಯ ಮೆರುಗನ್ನು ನೀಡುವ ಕಾರ್ಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಕರ್ನಾಟಕದ ಮಾಹಿತಿ ತಂತ್ರಜ್ಞಾನದ ಕಂಪೆನಿಗಳು ಸೇರಿದಂತೆ ಅಮೆರಿಕ,ಕೊರಿಯಾ, ಚೀನಾ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ದಸರಾ ಐತಿಹಾಸಿಕ ವೈಭವನ್ನು ಕಣ್ತುಂಬಿಕೊಂಡರು.

ದಸರಾ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದ ಅಂಗವಾಗಿ ಜಂಬೂ ಸವಾರಿ ಮೆರವಣಿಗೆ ಬನ್ನಿ ಮಂಟಪಕ್ಕೆ ತೆರಳುವುದರೊಂದಿಗೆ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬನ್ನಿ ಮರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದರು.

ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಬನ್ನಿಮಂಟಪದಲ್ಲಿ ನಡೆದ ಟಾರ್ಚ್ ಲೈಟ್ ಪರೇಡ್‌ನಲ್ಲಿ ಗೌರವ ವಂದನೆ ಸ್ವೀಕರಿಸಿದರು. ಅಲ್ಲದೇ ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯ ಸಮೀಪ ರಾಜವಂಶಸ್ಥರ ಆಯ್ದ ಕುಟುಂಬಿಕರ ನಡುವೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಖಾಸಗಿಯಾಗಿ ಶಮಿ ಪೂಜೆಯನ್ನು ನಡೆಸುವ ಮೂಲಕ ದಸರಾ ಉತ್ಸವಕ್ಕೆ ತೆರೆ ಬಿದ್ದಿದೆ.