ಜೆಡಿಎಸ್‌ಗೆ ರಾಜೀನಾಮೆ ನೀಡಿದ ಖೂಬಾ ಕಾಂಗ್ರೆಸ್ ಸೇರುತ್ತಾರೆಯೇ?

ಬುಧವಾರ, 28 ಆಗಸ್ಟ್ 2013 (16:49 IST)
PR
PR
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್‌ಗೆ ಮತ್ತೊಂದು ಶಾಕ್ ಉಂಟಾಗಿದೆ. ಜೆಡಿಎಸ್‌ನ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜೀನಾಮೆ ನೀಡುವ ಮೂಲಕ ಜೆಡಿಎಸ್‌ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಕಳೆದುಕೊಳ್ಳಬೇಕಾದ ಸಂಕಟ ಎದುರಾಗಿದೆ. ಬೀದರ್‌ನ ಬಸವಕಲ್ಯಾಣ ಕ್ಷೇತ್ರದ ಶಾಸಕ ಖೂಬಾ ಪಕ್ಷದ ಅಧ್ಯಕ್ಷ ದೇವೇಗೌಡರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಖೂಬಾಗೆ ಯಾವುದೇ ಸ್ಥಾನಮಾನವನ್ನು ಜೆಡಿಎಸ್ ನೀಡಿಲ್ಲ ಮತ್ತು ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಜತೆ ಕೈಜೋಡಿಸುವುದಕ್ಕೆ ಆಕ್ಷೇಪ ಸಲ್ಲಿಸಿದ ತಮ್ಮ ಮಾತಿಗೆ ಮನ್ನಣೆ ನೀಡದಿರುವುದರಿಂದ ಅವರು ಅಸಮಾಧಾನಗೊಂಡಿದ್ದರು. ತಾವು ಮುಖ್ಯಸಚೇತಕ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೆ. ಆದರೆ ತಮ್ಮ ಮಾತಿಗೆ ಕುಮಾರಸ್ವಾಮಿ ಮಾನ್ಯತೆ ನೀಡಲಿಲ್ಲ. ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಖೂಬಾ ತಿಳಿಸಿದ್ದಾರೆ.

. ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಜೆಡಿಎಸ್ ಪ್ರತಿಪಕ್ಷದ ಸ್ಥಾನಕ್ಕೆ ಕುತ್ತು ತಂದಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಬಲ ಈಗ 39ಕ್ಕೆ ಕುಸಿದಿದ್ದು, ಬಿಜೆಪಿ ಬಲ 40ರಷ್ಟಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರತಿಪಕ್ಷದ ಸ್ಥಾನವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆದರೆ ಕೂಬಾ ಸ್ಪೀಕರ್‌ಗೆ ಇನ್ನೂ ರಾಜೀನಾಮೆ ಸಲ್ಲಿಸದಿರುವುದರಿಂದ ಜೆಡಿಎಸ್ ಕೂಬಾ ಮೇಲೆ ಒತ್ತಡ ತಂದು ಅವರ ಮನವೊಲಿಸಬಹುದೇ ಎಂಬ ಪ್ರಶ್ನೆಯೂ ಆವರಿಸಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರು ಕುಮಾರಸ್ವಾಮಿ. ಕೂಬಾ ರಾಜೀನಾಮೆ ನೀಡುವುದು ದೃಢಪಟ್ಟರೆ, ಪ್ರತಿಪಕ್ಷದ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಲೇಬೇಕಾದ ಅನಿವಾರ್ಯತೆ ಉಂಟಾಗಿದ್ದು, ಪ್ರತಿಪಕ್ಷದ ನಾಯಕರ ಸ್ಥಾನ ಬಿಜೆಪಿಗೆ ಧಕ್ಕಲಿದೆ.

ಖೂಬಾ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂಬ ಊಹಾಪೋಹ ಹರಡಿರುವುದರಿಂದ ಕಾಂಗ್ರೆಸ್ ಆಪರೇಷನ್ ಹಸ್ತ ಆರಂಭಿಸಿದೆಯೇ ಎಂಬ ಸಂಶಯವೂ ಆವರಿಸಿದೆ. ಆದರೆ ಕಾಂಗ್ರೆಸ್ ಬಿಜೆಪಿಯ ಆಪರೇಷನ್ ಕಮಲದ ರೀತಿಯಲ್ಲಿ ಆಪರೇಷನ್ ಹಸ್ತವನ್ನು ಕೈಗೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಖಚಿತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ