ಜೈಲು ವಾಸಿ ಶಾಸಕರುಗಳಿಗೆ ಇನ್ನೂ ಸಿಕ್ಕಿಲ್ಲ ಬಿಜೆಪಿ ಟಿಕೇಟ್

ಬುಧವಾರ, 10 ಏಪ್ರಿಲ್ 2013 (15:12 IST)
PR
PR
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜೈಲು ವಾಸ ಕಂಡಿದ್ದ ಬಿಜೆಪಿ ಶಾಸಕರುಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಮಾಲೂರು ಕೃಷ್ಣಯ್ಯ ಶೆಟ್ಟಿ ಹಾಗೂ ವೈ. ಸಂಪಂಗಿಯವರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ನೀಡುವ ಕುರಿತು ಬಿಜೆಪಿ ನಾಯಕರು ಇನ್ನೂ ಯಾವುದೇ ನಿರ್ಧಾರಕ್ಕೆ ಬರದ ಪರಿಣಾಮ ಈ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆದಿದ್ದರೂ ಗೆಲ್ಲುವ ಸಾಧ್ಯತೆಯನ್ನು ಪರಿಗಣಿಸಬೇಕೊ ಅಥವಾ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೊ ಎಂಬುದರ ಬಗ್ಗೆಯೇ ಇನ್ನೂ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ.

ಈ ವಿಷಯದಲ್ಲಿ ಯಾವ ಮಾನದಂಡ ಅನುಸರಿಸಬೇಕು ಎಂಬುದರ ಬಗ್ಗೆಯೇ ರಾಜ್ಯ ಬಿಜೆಪಿ ನಾಯಕರಲ್ಲಿ ಗೊಂದಲ ಮೂಡಿದ್ದು ಜೈಲಿಗೆ ಹೋಗಿ ಬಂದವರಿಗೆ ಟಿಕೆಟ್‌ ಬೇಡ ಎಂದಾದರೆ ಸಂಪಂಗಿ, ಕಟ್ಟಾ ಸುಬ್ರಮಣ್ಯನಾಯ್ಡು ಮತ್ತು ಕೃಷ್ಣಯ್ಯಶೆಟ್ಟಿ ಅವರೆಲ್ಲರಿಗೂ ಟಿಕೆಟ್‌ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜ್ಯ ಬಿಜೆಪಿಯ ಕೆಲವು ನಾಯಕರು ಸಂಪಂಗಿ ಅವರೊಬ್ಬರಿಗೆ ಟಿಕೆಟ್‌ ನಿರಾಕರಿಸಿ, ಕಟ್ಟಾ ಮತ್ತು ಕೃಷ್ಣಯ್ಯಶೆಟ್ಟಿ ಅವರಿಗೆ ಮಾತ್ರ ಟಿಕೆಟ್‌ ನೀಡುವಂತೆ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಇನ್ನು ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಸಂಪಂಗಿ ಅವರಿಗೊಂದು ಮಾನದಂಡ, ಇನ್ನುಳಿದವರಿಗೊಂದು ಮಾನದಂಡ ಅನುಸರಿಸುವುದು ಯಾಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ