ಟಿಪ್ಪು ಸ್ಮಾರಕ ಸ್ಥಳಾಂತರಕ್ಕೆ ಚಿಂತನೆ: ಸಿಎಂ

ಭಾನುವಾರ, 7 ಡಿಸೆಂಬರ್ 2008 (10:27 IST)
ಬೆಂಗಳೂರು-ಮೈಸೂರು ರೈಲು ಮಾರ್ಗದ ಡಬಲ್ ಲೈನ್ ಕಾಮಗಾರಿಗೆ ಶ್ರೀರಂಗಪಟ್ಟಣ ಬಳಿ ಅಡ್ಡವಾಗಿರುವ ಟಿಪ್ಪು ಸುಲ್ತಾನ್ ಕಾಲದ ಸ್ಮಾರಕಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದ ರೈಲು ನಿಲ್ದಾಣದಲ್ಲಿ ಶನಿವಾರ ಗದಗ-ಬಾಗಲಕೋಟೆ ನಡುವಣ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ದೇಶಾದ್ಯಂತ ರೈಲ್ವೆ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆ ಕೇವಲ ಕರ್ನಾಟಕವನ್ನು ಕಡೆಗಣಿಸಿರುವುದು ವಿಷಾದಕರ ಎಂದ ಅವರು, ಗೇಜ್ ಪರಿವರ್ತನೆ ಮತ್ತಿತರ ಅಭಿವೃದ್ಧಿ ಕಾಮಗಾರಿ ವೆಚ್ಚದಲ್ಲಿ ರಾಷ್ಟ್ರದಲ್ಲಿಯೇ ಕರ್ನಾಟಕ ಸರಕಾರ ಮಾತ್ರ ಅರ್ಧ ಪಾಲನ್ನು ನೀಡುತ್ತಿದೆ ಎಂದರು.

ಗದಗ-ಬಾಗಲಕೋಟೆ ನಡುವಣ ಗೇಜ್ ಪರಿವರ್ತನೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಈ ಭಾಗದ ಕೈಗಾರಿಕೆ, ವಾಣಿಜ್ಯ, ಉದ್ಯಮ ಮತ್ತು ಕೃಷಿ ಕ್ಷೇತ್ರಗಳಿಗೆ ಸಾಕಷ್ಟು ಅನುಕೂಲ ಉಂಟಾಗಲಿದೆ ಎಂದು ಹೇಳಿದರು.

ನೂತನ ರೈಲು ಸಂಚಾರ ಉದ್ಘಾಟನೆ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವ ಡಾ.ಆರ್.ವೇಲು, ಸಂಸದ ಪ್ರಹ್ಲಾದ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಸಚಿವ ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ