ಡಿಕೆಶಿ, ಬೇಗ್ ವಿರುದ್ಧ ಹಿರೇಮಠ್ ದಾಖಲೆ ಬಿಡುಗಡೆ : ಸಂಪುಟದಿಂದ ಕಿತ್ತುಹಾಕಲು ಆಗ್ರಹ

ಶನಿವಾರ, 18 ಜನವರಿ 2014 (13:59 IST)
PR
PR
ಬೆಂಗಳೂರು: ಬೆಂಗಳೂರಿನಲ್ಲಿ ಸಮಾಜಪರಿವರ್ತನಾ ಸಂಘಟನೆ ಅಧ್ಯಕ್ಷ ಎಸ್.ಆರ್. ಹಿರೇಮಠ್ ಸುದ್ದಿಗೋಷ್ಠಿ ನಡೆಸಿ ಸಚಿವರಾದ ಡಿಕೆಶಿ, ರೋಷ್ ಬೇಗ್ ವಿರುದ್ಧ ಆರೋಪ ಮಾಡಿದ್ದಾರೆ. ಅವರಿಬ್ಬರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಆರೋಪಗಳನ್ನು ಕುರಿತು ಸುಪ್ರೀಂ ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಬೇಕು. ರೋಷನ್ ಬೇಗ್ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ಜತೆ ಸಂಬಂಧ ಹೊಂದಿದ್ದರು. ತೆಲಗಿ ಜತೆ ಸೇರಿ ಅಕ್ರಮ ಸಂಪತ್ತು ಗಳಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಾಗಿದೆ.

ಈ ಕುರಿತು ಲೋಕಾಯುಕ್ತ ಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ರೋಷನ್ ಬೇಗ್ ಅಧಿಕಾರ ದುರುಪಯೋಗ ಮಾಡಿದ್ದಾರೆಂದು ಹೈಕೋರ್ಟ್ ಕೂಡ ಸ್ಪಷ್ಟನೆ ನೀಡಿದೆ ಎಂದು ಹಿರೇಮಠ್ ಆರೋಪಿಸಿದರು. ಬಡಮಕ್ಕಳ ಶಿಕ್ಷಣ ಸಂಸ್ಥೆ ಹೆಸರಲ್ಲಿ ಒಂದು ಎಕರೆ ಜಮೀನನ್ನು ಬೇಗ್ ಕಬಳಿಕೆ ಮಾಡಿದ್ದಾರೆ. ತಮಗೆ ಯಾವುದೇ ನಿವೇಶನ ಇಲ್ಲವೆಂದು ಹೇಳಿದ್ದರೂ, ಅರ್ಕಾವತಿ ಬಡಾವಣೆಯಲ್ಲಿ 50X 80 ವಿಸ್ತೀರ್ಣದ ನಿವೇಶನ ಹೊಂದಿದ್ದಾರೆ ಎಂದು ಹಿರೇಮಠ್ ಹೇಳಿದರು. ಭ್ರಷ್ಟಾಚಾರದಲ್ಲಿ ಜನಾರ್ದನ ರೆಡ್ಡಿ ಮತ್ತು ಡಿಕೆಶಿ ನಡುವೆ ಯಾವುದೇ ವ್ಯತ್ಯಾಸವಿಲ್ಲ.

ಡಿಕೇಶಿ ಸಹೋದರರು ಅಕ್ರಮ ಅದಿರು ಸಾಗಣೆಯಲ್ಲಿ ನಿರತರಾಗಿದ್ದರು. 10.8 ಲಕ್ಷ ಟನ್ ಅದಿರು ಲೂಟಿ ಮಾಡಿದ್ದಾರೆ. 4.2 ಎಕರೆ ಭೂಮಿ ಅಕ್ರಮವಾಗಿ ಡೀನೋಟಿಫಿಕೇಶನ್ ಮಾಡಿದ್ದಾರೆ. ಈ ಪ್ರಕರಣ ಕುರಿತು ಚಾರ್ಜ್‌ಶೀಟ್ ದಾಖಲಾಗಿದೆ ಎಂದು ಎಸ್.ಆರ್. ಹಿರೇಮಠ್ ತಿಳಿಸಿದ್ದಾರೆ. ಕೂಡಲೇ ಇವರಿಬ್ಬರನ್ನು ಸಂಪುಟದಿಂದ ಕಿತ್ತುಹಾಕಬೇಕು ಎಂದು ಹಿರೇಮಠ್ ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ