ಡೀವಿ ಹೆದರ್ಬೇಡಿ, ಯಡ್ಡಿ ನಿರ್ದೋಷಿಯಾಗ್ಲಿ: ಹೈಕಮಾಂಡ್ ಅಭಯ

ಮಂಗಳವಾರ, 27 ಡಿಸೆಂಬರ್ 2011 (11:26 IST)
PR
ಶತಾಯಗತಾಯ ತಾನು ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಬೇಕೆಂದು ತೆರೆಮರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.

ಸದಾನಂದ ಗೌಡರನ್ನು ಮುಖ್ಯಮಂತ್ರಿ ಪಟ್ಟದಿಂದ ಇಳಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಉತ್ತರ ಪ್ರದೇಶ ಒಳಗೊಂಡಂತೆ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ಸಿದ್ದತೆಯಲ್ಲಿ ನಾವು ತೊಡಗಿಕೊಂಡಿದ್ದೇವೆ. ಸದ್ಯಕ್ಕೆ ಕರ್ನಾಟಕದ ಬಗ್ಗೆ ಚಿಂತಿಸಲು ಸಮಯವಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಬಿಜೆಪಿ ನಾಯಕರು ಪ್ರಜಾವಾಣಿಗೆ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಶಾಮೀಲಾಗಿರುವ ಮಾಜಿ ಮುಖ್ಯಮಂತ್ರಿಗೆ ಅವರ ಮೇಲಿನ ಪ್ರಕರಣಗಳು ಇತ್ಯರ್ಥವಾಗುವವರೆಗೂ ಕಾಯುವಂತೆ ಸೂಚಿಸಲಾಗಿದೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಯಡಿಯೂರಪ್ಪನವರಿಗೆ ಈ ಸೂಚನೆ ನೀಡಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲೂ ಮಾಜಿ ಮುಖ್ಯಮಂತ್ರಿ ಬೇಡಿಕೆಯನ್ನು ಮಾನ್ಯ ಮಾಡಬಾರದು ಎಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಪಕ್ಷದ ಅಧ್ಯಕ್ಷರಿಗೆ ಹೇಳಿದ್ದಾರೆಂಬುದಾಗಿ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ರಾಜ್ಯ ಹೈಕೋರ್ಟ್ ಮಂಜೂರು ಮಾಡಿದ ಜಾಮೀನು, ಅದಕ್ಕೆ ದೊರೆತಿರುವ ಸುಪ್ರೀಂಕೋರ್ಟ್ ಅನುಮೋದನೆಯನ್ನು ಯಡಿಯೂರಪ್ಪ ಪ್ರಮುಖವಾಗಿ ಪಕ್ಷದ ವರಿಷ್ಠರ ಮುಂದಿಟ್ಟಿದ್ದಾರೆ. ಜಾಮೀನು ಸಿಕ್ಕ ಕೂಡಲೇ ನೀವು ನಿರಪರಾಧಿ ಅಲ್ಲ. ನಿಮ್ಮ ವಿರುದ್ಧದ ಪ್ರಕರಣಗಳು ಇತ್ಯರ್ಥವಾಗುವವರೆಗೂ ಕಾಯಿರಿ. ನಿರ್ದೋಷಿಯಾಗಿ ಹೊರಬನ್ನಿ. ನಿಮ್ಮ ಸೇವೆಯನ್ನು ಪಕ್ಷ ಖಂಡಿತವಾಗಿ ಬಳಸಿಕೊಳ್ಳುತ್ತದೆ ಎಂದು ಗಡ್ಕರಿಯವರು ಯಡಿಯೂರಪ್ಪನವರಿಗೆ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ