ಧಗ ಧಗನೇ ಉರಿದ ವೋಲ್ವೋ ಬಸ್: ಸಮಯಪ್ರಜ್ಞೆಯಿಂದ 40 ಜನರು ಪಾರು

ಶನಿವಾರ, 23 ನವೆಂಬರ್ 2013 (18:55 IST)
PR
PR
ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ. ಸಮಯಪ್ರಜ್ಞೆಯಿಂದ ಚಾಲಕ ಮತ್ತು ನಿರ್ವಾಹಕರು ಬಸ್ಸಿನಲ್ಲಿದ್ದ 40 ಜನರ ಪ್ರಾಣವನ್ನು ಉಳಿಸಿದ್ದಾರೆ. ಆಂಧ್ರಪ್ರದೇಶ-ಕರ್ನಾಟಕ ಗಡಿಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟಭರ್ತಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ, ಡೀಸೆಲ್ ಟ್ಯಾಂಕ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿತು.. ತಕ್ಷಣವೇ ಬಸ್ಸನ್ನು ನಿಲ್ಲಿಸಿ 40 ಜನ ಪ್ರಯಾಣಿಕರನ್ನು ಚಾಲಕ ಕೆಳಕ್ಕೆ ಇಳಿಸಿದ್ದಾನೆ. ತಕ್ಷಣವೇ ಬಾಗೇಪಲ್ಲಿ ಪೊಲೀಸ್ ಠಾಣೆಗೆ ಸುದ್ದಿಮುಟ್ಟಿಸಲಾಯಿತು. ಆಂಧ್ರದ ಕೋಡಿಕೊಂಡ ಚೆಕ್‌ಪೋಸ್ಟ್ ಬಳಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ.

ಬಸ್ ಬೆಂಕಿಹಚ್ಚಿಕೊಂಡು ಧಗಧಗನೇ ಉರಿಯುತ್ತಿದೆಯೆಂದು ಹೇಳಲಾಗುತ್ತಿದೆ. ಬಾಗೇಪಲ್ಲಿಯಲ್ಲಿ ಯಾವುದೇ ಅಗ್ನಿಶಾಮಕ ಘಟಕವಿಲ್ಲದಿರುವುದರಿಂದ ಬೆಂಕಿ ನಂದಿಸಲು ಅಡ್ಡಿಯಾಗಿದೆ. ಇತ್ತೀಚೆಗೆ ಎರಡು ವೋಲ್ವೋ ಬಸ್‌ಗಳಿಗೆ ಬೆಂಕಿ ಹತ್ತಿಕೊಂಡ ದುರಂತ ಸಂಭವಿಸಿದ ನೆನಪು ಇನ್ನೂ ಮಾಸದಿರುವಾಗಲೇ ಮತ್ತೊಂದು ಬಸ್‌ಗೆ ಬೆಂಕಿಹೊತ್ತಿಕೊಂಡಿದೆ. ಬೆಂಗಳೂರಿನಿಂದ ಮುಂಬೈ ತೆರಳುತ್ತಿದ್ದ ವೋಲ್ವೋ ಬಸ್ ಹಾವೇರಿ ಬಳಿ ಬೆಂಕಿಹತ್ತಿಕೊಂಡು ಏಳು ಜನರು ಸತ್ತಿದ್ದರು. ಈ ಬಸ್ ಮಾಲೀಕರು ವೋಲ್ವೋ ಬಸ್ ನಿರ್ಮಾಣದಲ್ಲಿರುವ ದೋಷದ ಬಗ್ಗೆ ತನಿಖೆ ಮಾಡಬೇಕೆಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ