ನಡುಮನಿ ವಜಾಕ್ಕೆ ಮುತಾಲಿಕ್ ಒತ್ತಾಯ

ಗುರುವಾರ, 31 ಜನವರಿ 2008 (18:45 IST)
ಉಗ್ರಗಾಮಿಗಳ ಅಡಗು ತಾಣವಾಗಿರುವ ಹುಬ್ಬಳ್ಳಿ ಧಾರವಾಡಗಳಲ್ಲಿ ಉಗ್ರಗಾಮಿಗಳೇ ಇಲ್ಲವೆಂದು ಹೇಳುತ್ತಿರುವ ಪೊಲೀಸ್ ಆಯುಕ್ತ ನಾರಾಯಣ ನಡಮನಿಯವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ರಾಷ್ಟ್ತ್ರೀಯ ಹಿಂದೂ ಸೇನಾ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಾರ್ವಜನಿಕರ ಬಗ್ಗೆ ಗಮನ ಕೊಡದೇ ಭ್ರಷ್ಟಾಚಾರದಲ್ಲಿ ಮುಳುಗಿರುವ ನಡಮನಿಯವರನ್ನು ಶೀಘ್ರವೇ ಅಮಾನತುಗೊಳಿಸಬೇಕು. ಈ ಬಗ್ಗೆ ತಾವು ರಾಜ್ಯಪಾಲರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಶಂಕಿತ ಉಗ್ರ ಅಸಾದುಲ್ಲಾನಿಗೆ ಒಂದುವರೆ ವರ್ಷಗಳ ಕಾಲ ಇಲ್ಲಿನ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಎಂ.ಎ. ಕುಂದಗೋಳ ಹಾಗೂ ಲೆಕ್ಚರರ್ ಹುಲ್ಲೂರು ಎಂಬುವವರೊಂದಿಗೆ ಸಂಪರ್ಕವಿತ್ತು. ಆತ ಹುಲ್ಲೂರು ಅವರ ಮನೆಯಲ್ಲೇ ವಾಸವಾಗಿದ್ದ ಎಂಬ ಅಂಶಗಳು ಬೆಳಕಿಗೆ ಬಂದಿವೆ. ಈ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು. ಆಗ ಮಾತ್ರ ಉಗ್ರರ ಹುಟ್ಟಡಗಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಅಲ್ಲದೆ, ಇಂಡಿ ಪಂಪ್ ಪ್ರದೇಶದಲ್ಲಿ ವಿದೇಶಿ ಕರೆನ್ಸಿ ವಿನಿಮಯವಾಗುತ್ತಿದ್ದು, ಕೆಲವು ಮಸೀದಿಗಳಲ್ಲಿ ವಿದೇಶಿ ಮುಸ್ಲಿಂ ಪ್ರಜೆಗಳು ವಾಸವಾಗಿದ್ದಾರೆ. ಅವರನ್ನು ಪೊಲೀಸರು ಪತ್ತೆ ಹಚ್ಚಿ, ತನಿಖೆ ನಡೆಸಬೇಕೆಂದು ಮುತಾಲಿಕ್ ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ