ನನ್ನ ಸೋಲಿಗೆ ನಾನೇ ನೇರ ಹೊಣೆ: ಸಿಂಧ್ಯಾ

ಭಾನುವಾರ, 12 ಮೇ 2013 (10:56 IST)
PR
ಯಾವುದೇ ಕಾರಣಕ್ಕೂ ವಿಧಾನಸಭೆಗೆ ನಾನು ಹಿಂಬಾಗಿಲಿನಿಂದ ಪ್ರವೇಶ ಮಾಡುವುದಿಲ್ಲ ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ತಿಳಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾದೇಶಕ್ಕೆ ಬೆಲೆ ಕೊಡುತ್ತೇನೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆಯ ಒಲವು ಗಳಿಸಿಕೊಳ್ಳುವುದರಲ್ಲಿ ವಿಫ‌ಲನಾಗಿದ್ದು, ನನ್ನ ಸೋಲಿಗೆ ನಾನೇ ನೇರ ಹೊಣೆಗಾರನಾಗಿದ್ದೇನೆ ಹೊರತು ಬೇರೆ ಯಾರೂ ಹೊಣೆಯಲ್ಲ ಎಂದರು.

ಪಕ್ಷದ ಕಾರ್ಯಕರ್ತರು, ಮುಖಂಡರು ಒಮ್ಮತದಿಂದ ಚುನಾವಣೆಯಲ್ಲಿ ದುಡಿದಿದ್ದಾರೆ. ಹಾಗೆಯೇ ಎಲ್ಲಾ ಜನಾಂಗದ ಮತದಾರರು ಬೆಂಬಲಿಸಿ ಮತ ನೀಡಿದ್ದಾರೆ. ಯಾವುದೇ ಕಾರಣ ಹುಡುಕದೆ ನನ್ನ ಸೋಲನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.

ನನ್ನ 41 ವರ್ಷಗಳ ಸಾರ್ವಜನಿಕ ಜೀವನದಲ್ಲಿ ನೂರಾರು ಚುನಾವಣೆಗಳನ್ನು ನೋಡಿದ್ದೇನೆ ಹಾಗೂ ಎದುರಿಸಿದ್ದೇನೆ. ವೈಯುಕ್ತಿಕವಾಗಿ 9 ಚುನಾವಣೆ ಎದುರಿಸಿದ್ದು, 2 ಲೋಕಸಭಾ ಹಾಗೂ 7 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದರು.

ವಿಧಾನಸಭೆ ಹೊರಗಡೆಯಿದ್ದೇ ನಾನು ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡು ಕ್ಷೇತ್ರದ ಮತದಾರರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುತ್ತೇನೆ. ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡರು ಹಾಗೂ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸಿ ಪ್ರಚಾರ ಮಾಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಚುನಾವಣಾ ಅಕ್ರಮಗಳ ಕುರಿತು ಅಯೋಗಕ್ಕೆ ದೂರು ನೀಡಿದ್ದು, ಚುನಾವಣೆ ವೇಳೆ ಹಾಗೂ ಮೊದಲು ಇಲ್ಲಿಯ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದು, ಮುಂದೆ‌ ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದರು.

ಚುನಾವಣೆಗೆ ಮೊದಲೇ ಡಿ.ಎಂ.ವಿಶ್ವನಾಥ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದು, ಈ ಕುರಿತು ಪಕ್ಷದ ಅಧ್ಯಕ್ಷರಲ್ಲಿ ಒತ್ತಡ ತರುತ್ತೇನೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕ್ಷೇತ್ರಾದ್ಯಂತ ಪ್ರವಾಸ ಮಾಡಲಿದ್ದು ಯಾವುದೇ ಕಾರಣಕ್ಕೂ ಕಾರ್ಯಕರ್ತರು ಎದೆಗುಂದಬಾರದು. ನಾನೂ ಕೂಡ ಸೋಲಿನಿಂದ ವಿಚಲಿತನಾಗಿಲ್ಲ. ಕ್ಷೇತ್ರಾದ್ಯಂತ ನಿಮ್ಮ ಮನೆ ಮನೆಗೆ ಭೇಟಿ ನೀಡಿ ನಿಮ್ಮ ಸೇವೆಯಲ್ಲಿ ತೊಡಗುತ್ತೇನೆ ಎಂದು ಭರವಸೆ ನೀಡಿದರು.

ಗೋಷ್ಠಿಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಬಿ.ನಾಗರಾಜು, ಮುಂಡ ಬಾಲ ನರಸಿಂಹಯ್ಯ, ಮಾಜಿ ಪುರಸಭಾ ಸದಸ್ಯ ಜಯರಾಂ, ಸಿದ್ದಾಪ್ಪಾಜಿ, ರಾಮಕೃಷ್ಣ, ಮಾಜಿ ತಾಪಂ ಸದಸ್ಯ ಕಬ್ಟಾಳೇಗೌಡ, ಕೋಡಿಹಳ್ಳಿ ಜೆಸಿಬಿ ಗಣೇಶ್‌, ಸ್ಟುಡಿಯೋ ಚಂದ್ರು, ಸರ್ದಾರ್‌, ಚಿನ್ನಸ್ವಾಮಿ, ಗಬ್ಟಾಡಿ ರವಿ, ಉಫ್ ವಿಶಾಲಾಕ್ಷ ಇತರರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ