'ನಮಗೆ ಮಲಗುವುದಕ್ಕೆ ಸ್ಥಳವಿಲ್ಲ, ಹೊಟೆಲ್‌ನಲ್ಲಿ ಊಟ ಮಾಡ್ತೇವೆ'

ಗುರುವಾರ, 22 ಆಗಸ್ಟ್ 2013 (14:09 IST)
PR
PR
ಬೆಂಗಳೂರು: 'ನಮಗೆ ಮಲಗುವುದಕ್ಕೆ ಸ್ಥಳವಿಲ್ಲ, ಹೊಟೆಲ್‌ನಲ್ಲಿ ಊಟಮಾಡುತ್ತಿದ್ದೇವೆ, ಇದೆಲ್ಲವನ್ನೂ ಭರಿಸುವುದಕ್ಕೆ ಹಣವೆಲ್ಲಿದೆ ' ಇದು ಸೋಮೇಶ್ವರನಗರದಲ್ಲಿ ಕುಸಿದ ಕಟ್ಟಡದ ಸುತ್ತಮುತ್ತ ವಾಸಿಸುವ ಗುಡಿಸಲು ನಿವಾಸಿಗಳು ತೋಡಿಕೊಂಡ ಅಳಲು. ಸೋಮೇಶ್ವರನಗರದಲ್ಲಿ ಆಂಶಿಕವಾಗಿ ಆಗಸ್ಟ್ 19ರಂದು ಕುಸಿದ ಕಟ್ಟಡ ನೆರೆಹೊರೆಯ ಜನರ ಜೀವಕ್ಕೆ ತೀವ್ರ ಅಪಾಯವನ್ನುಂಟು ಮಾಡಿದೆ. ಕಟ್ಟಡವು ವಾಲಿಕೊಂಡಿದ್ದು, ಭಾರಿ ಮಳೆ ಬಿದ್ದರೆ ಕೂಡಲೇ ಕುಸಿಯುತ್ತದೆಂಬ ಭಾವನೆ ಆವರಿಸಿದೆ. ಹಾಗೆ ಕುಸಿದರೆ, ಅಕ್ರಮ ಕಟ್ಟಡದ ಸುತ್ತಮುತ್ತ ಇರುವ ಗುಡಿಸಲುಗಳು ಅವಶೇಷಗಳಾಗುವ ಸಂಭವವಿದೆ.

ಕಟ್ಟಡ ನೆಲಸಮಗೊಳಿಸುವುದಕ್ಕೆ ವಿಶೇಷ ಯಂತ್ರವನ್ನು ಚೆನ್ನೈನಿಂದ ತರಿಸುವುದಕ್ಕೆ ಬಿಬಿಎಂಪಿ ಕಾಯುತ್ತಿದೆ. ಆದರೆ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳು ಮಾತ್ರ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ನಾವು ಕಳೆದ ಮೂರು ದಿನಗಳಿಂದ ತೆರೆದ ಆವರಣದಲ್ಲಿ ವಾಸಿಸುತ್ತಿದ್ದೇವೆ. ಕಟ್ಟಡ ಇನ್ನೊಮ್ಮೆ ಕುಸಿದರೆ ನಮ್ಮ ಗತಿಯೇನು ಎಂದು ನಿವಾಸಿಯೊಬ್ಬರು ಪ್ರಶ್ನಿಸಿದ್ದಾರೆ.

ಕಟ್ಟಡದ ಆಸುಪಾಸಿನಲ್ಲಿ ವಾಸಿಸುವವರಿಗೆ ಬಿಬಿಎಂಪಿ ಸ್ಥಳಾಂತರ ಮಾಡಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಸಮೀಪದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯಕ್ಕೆ ನಿವಾಸಿಗಳು ಒಪ್ಪುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಕಟ್ಟಡ ಆಸುಪಾಸಿನ ನಿವಾಸಿಗಳು ಹೇಳುವುದೇ ಬೇರೆ. ಶಾಲೆಯ ಕ್ಯಾಂಪಸ್‌ನಲ್ಲಿ ದೊಡ್ಡ ಸಮುದಾಯ ಭವನದೊಳಕ್ಕೆ ನಮ್ಮನ್ನು ಸ್ಥಳಾಂತರಿಸಲು ಬಿಬಿಎಂಪಿ ಹೊರಟಿದೆ. ಆದರೆ ನಮ್ಮ ವಸ್ತುಗಳನ್ನು ಇಡುವ ವ್ಯವಸ್ಥೆಯಿಲ್ಲ. ಸರಿಯಾದ ಶೌಚಾಲಯ ವ್ಯವಸ್ಥೆ ಕೂಡ ಇಲ್ಲವೆಂದು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ